ಕೋಝಿಕ್ಕೋಡ್(ಕೇರಳ): ಮಹಾತ್ಮ ಗಾಂಧೀಜಿ ಅವರನ್ನು ಹತ್ಯೆಗೈದ ನಾಥುರಾಮ್ ಗೋಡ್ಸೆ ಕುರಿತ ಪೋಸ್ಟ್‌ವೊಂದಕ್ಕೆ ಫೇಸ್‌ಬುಕ್‌ನಲ್ಲಿ ಕಾಮೆಂಟ್ ಮಾಡಿರುವ ಕಾರಣಕ್ಕೆ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-ಕ್ಯಾಲಿಕಟ್ (ಎನ್‌ಐಟಿ) ಮಹಿಳಾ ಪ್ರಾಧ್ಯಾಪಕಿ ಎ.ಶೈಜಾ ಎಂಬವರ ವಿರುದ್ಧ ಕೇರಳ ಪೊಲೀಸರು ಶನಿವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎಸ್‌ಎಫ್‌ಐ, ಕೆಎಸ್‌ಯು, ಎಂಎಸ್‌ಎಫ್ ಸೇರಿದಂತೆ ವಿವಿಧ ವಿದ್ಯಾರ್ಥಿ ಸಂಘಟನೆಗಳು ನಗರದ ಹಲವು ಪೊಲೀಸ್ ಠಾಣೆಗಳಲ್ಲಿ ಪ್ರಾಧ್ಯಾಪಕಿ ವಿರುದ್ಧ ದೂರು ನೀಡಿದ್ದವು. ಐಪಿಸಿ ಸೆಕ್ಷನ್ 153 ಅಡಿಯಲ್ಲಿ (ಗಲಭೆ ಉಂಟುಮಾಡುವ ಉದ್ದೇಶದಿಂದ ಪ್ರಚೋದನೆ) ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಜನವರಿ 30ರಂದು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಹಿರಿಯ ಪ್ರಾಧ್ಯಾಪಕಿ ಶೈಜಾ ಅವರು ಫೇಸ್‌ಬುಕ್‌ನಲ್ಲಿ, "ಭಾರತವನ್ನು ಉಳಿಸಿದ್ದಕ್ಕಾಗಿ ಗೋಡ್ಸೆ ಬಗ್ಗೆ ಹೆಮ್ಮೆ ಪಡಬೇಕು" ಎಂದು ಕಾಮೆಂಟ್ ಮಾಡಿದ್ದರು. ಹಿಂದೂ ಮಹಾಸಭಾ ಕಾರ್ಯಕರ್ತ ನಾಥೂರಾಮ್ ವಿನಾಯಕ್ ಗೋಡ್ಸೆ ಭಾರತದಲ್ಲಿ ಅನೇಕರ ಹೀರೋ ಎಂದು ಗೋಡ್ಸೆ ಫೋಟೋ ಪೋಸ್ಟ್ ಮಾಡಿದ್ದ ವಕೀಲ ಕೃಷ್ಣ ರಾಜ್ ಎಂಬವರ ಪೋಸ್ಟ್‌ಗೆ ಪ್ರಾಧ್ಯಾಪಕಿ ಕಾಮೆಂಟ್ ಮಾಡಿದ್ದಾರೆ.
ಪ್ರಾಧ್ಯಾಪಕಿ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದರು. ಈ ವಿಷಯ ವಿವಾದವಾಗುತ್ತಿದ್ದಂತೆ ಪ್ರಾಧ್ಯಾಪಕಿ ತಮ್ಮ ಕಾಮೆಂಟ್ ಡಿಲೀಟ್ ಮಾಡಿದ್ದಾರೆ.
ಜನವರಿ 22ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನಾ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಸಂಭ್ರಮಿಸಿದ್ದರು. ಈ ಕುರಿತಂತೆ ಕಳೆದ ಕೆಲವು ವಾರಗಳಿಂದ ಎನ್‌ಐಟಿಯಲ್ಲಿ ವಿವಾದ ಉಂಟಾಗಿತ್ತು. ಆಚರಣೆಯ ವಿರುದ್ಧ ಪ್ರತಿಭಟಿಸಿದ ವೈಶಾಖ್ ಎಂಬ ವಿದ್ಯಾರ್ಥಿಯನ್ನು ಕಾಲೇಜಿನಿಂದ ಅಮಾನತುಗೊಳಿಸಲಾಗಿತ್ತು.
10 ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲು: ಜನವರಿ 22ರಂದು ಕೈಲಾಸ್ ಎಂಬ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ಘಟನೆಯಲ್ಲಿ 10 ವಿದ್ಯಾರ್ಥಿಗಳ ವಿರುದ್ಧ ಕುನ್ನಮಂಗಲಂ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಇದನ್ನೂ ಓದಿ: ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ದೆಹಲಿ ನ್ಯಾಯಾಲಯಕ್ಕೆ ದೂರು ನೀಡಿದ ಇಡಿ