ನವದೆಹಲಿ: ಬಿಜೆಪಿ ಪಕ್ಷವು ಮತಕ್ಕಾಗಿ ಚಿನ್ನದ ಸರಗಳನ್ನು ಹಂಚುತ್ತಿದೆ. ಈ ಮೂಲಕ ಕೇಸರಿ ಪಕ್ಷ ಅನ್ಯಾಯದ ಮಾರ್ಗಗಳನ್ನು ಅನುಸರಿಸುತ್ತಿದೆ ಎಂದು ಎಎಪಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಗಂಭೀರ ಆರೋಪ ಮಾಡಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಮತದಾರರು ಪ್ರಚೋದನೆಗೆ ಒಳಗಾಗಬಾರದು. ಎರಡು ಕಾಲೊನಿಗಳಲ್ಲಿ ಚಿನ್ನದ ಸರ ಹಂಚಲಾಗುತ್ತಿದೆ ಎಂದು ಕೇಳಿದ್ದೇನೆ. ದೆಹಲಿ ಜನರನ್ನು ಖರೀದಿಸಲು ಪ್ರಯತ್ನಿಸುತ್ತಿರುವ ಬಿಜೆಪಿಯ ನಡೆ ನಾಚಿಕೆಗೇಡು. ಅವರು ಏನೇ ಕೊಟ್ಟರೂ ಸ್ವೀಕರಿಸಿ, ಆದರೆ ನಿಮ್ಮ ಮತ ಮಾರಾಟವಾಗಲು ಬಿಡಬೇಡಿ. ನಮ್ಮ ಮತ ವಜ್ರಕ್ಕಿಂತ ಅಮೂಲ್ಯವಾದದ್ದು. ಚುನಾವಣಾ ಸಂದರ್ಭದಲ್ಲಿ ಹಣ ಅಥವಾ ಯಾವುದೇ ವಸ್ತುಗಳನ್ನು ನೀಡಿದರೆ, ಎಎಪಿ ಅಭ್ಯರ್ಥಿಗಳು ಸೇರಿದಂತೆ ಯಾರಿಗೂ ಮತ ಹಾಕಬೇಡಿ" ಎಂದು ದೆಹಲಿಯ ಜನರಿಗೆ ಮನವಿ ಮಾಡಿದರು.
गाली गलौज पार्टी के लोग दिल्ली की जनता को ख़रीदना चाहते हैं।
— Arvind Kejriwal (@ArvindKejriwal) January 14, 2025
वक्त आ गया है इन बेईमानों को ये बताने का कि दिल्ली की जनता बिकाऊ नहीं है। इस देश का लोकतंत्र बिकाऊ नहीं है।
दिल्लीवालों से मेरी खास अपील - pic.twitter.com/HzpQZpgWFp
ದೆಹಲಿಯಲ್ಲಿ ಮುಂದಿನ ತಿಂಗಳು ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ಆಮ್ ಆದ್ಮಿ ಪಕ್ಷ ಹಾಗೂ ಭಾರತೀಯ ಜನತಾ ಪಕ್ಷ ನಡುವಿನ ರಾಜಕೀಯ ಜಟಾಪಟಿ ರಾಷ್ಟ್ರ ರಾಜಧಾನಿಯಲ್ಲಿ ತೀವ್ರಗೊಂಡಿದೆ.
ಭಾರತದ ಪ್ರಜಾಪ್ರಭುತ್ವ ಮಾರಾಟಕ್ಕಿಲ್ಲ: "ಬಿಜೆಪಿ ಈಗ ಸಾರ್ವಜನಿಕರಿಗೆ ಚಿನ್ನದ ಸರಗಳನ್ನು ವಿತರಿಸಲು ಪ್ರಾರಂಭಿಸಿದೆ ಎಂದು ನಮಗೆ ತಿಳಿದಿದೆ. ಎರಡು ಕಾಲೋನಿಗಳಲ್ಲಿ ಅವರು ಇದನ್ನು ಮಾಡಿದ್ದಾರೆ. ಅವರ ನಾಯಕರು ದೆಹಲಿಯ ಜನರ ಮತಗಳನ್ನು ಖರೀದಿಸುತ್ತೇವೆ ಎಂದು ಬಹಿರಂಗವಾಗಿ ಹೇಳುತ್ತಿದ್ದಾರೆ. ಈ ಜನರು ದೆಹಲಿಯ ಜನರನ್ನು ಮಾರಾಟಕ್ಕಿದ್ದಾರೆಂದು ಭಾವಿಸಿದ್ದಾರೆ. ಆದರೆ, ಈ ಬಾರಿ ದೆಹಲಿಯ ಜನ ಅವರಿಗೆ ಪಾಠ ಕಲಿಸುತ್ತಾರೆ. ಭಾರತೀಯ ಪ್ರಜಾಪ್ರಭುತ್ವ ಮಾರಾಟಕ್ಕಿಲ್ಲ ಮತ್ತು ದೆಹಲಿಯ ಜನರನ್ನು ಖರೀದಿಸಬಲ್ಲ ಯಾರೂ ಈ ಭೂಮಿಯಲ್ಲಿ ಹುಟ್ಟಿಲ್ಲ ಎಂಬುದನ್ನು ತೋರಿಸುತ್ತಾರೆ" ಎಂದು ಬಿಜೆಪಿ ವಿರುದ್ಧ ದಾಳಿ ನಡೆಸಿದರು.
गाली गलौज पार्टी वाले खुलेआम कह रहे हैं - “अरे, हम तो पैसे फेंक कर दिल्ली की जनता को ख़रीद लेंगे।” …..
— Arvind Kejriwal (@ArvindKejriwal) January 14, 2025
दिल्ली वालों, इनको बता दो कि दिल्ली वाले बिकाऊ नहीं हैं। https://t.co/mA01kiPH6g
ಯಾರಾದರೂ ಏನನ್ನಾದರೂ ವಿತರಿಸಿದರೆ ತೆಗೆದುಕೊಳ್ಳಿ: "ಯಾರಾದರೂ ಚಿನ್ನದ ಸರಗಳು, ಹಣ, ಕಂಬಳಿಗಳು, ಸೀರೆಗಳು ಅಥವಾ ಇತರ ವಸ್ತುಗಳನ್ನು ವಿತರಿಸುತ್ತಿದ್ದರೆ, ಅವುಗಳನ್ನು ತೆಗೆದುಕೊಳ್ಳಿ. ಆದರೆ ಯಾವುದೇ ಕಾರಣಕ್ಕೂ ನಿಮ್ಮ ಮತವನ್ನು ಮಾರಾಟವಾಗಲು ಬಿಡಬೇಡಿ. ಹಣದ ಆಧಾರದ ಮೇಲೆ ಅಧಿಕಾರಕ್ಕೆ ಬರಲು ಬಯಸುವವರು ದೇಶದ್ರೋಹಿಗಳು. ಈ ಬಾರಿ ದೆಹಲಿ ಜನರು ಮಾರಾಟಕ್ಕಿಲ್ಲ ಎಂದು ತೋರಿಸಬೇಕಾಗುತ್ತದೆ" ಎಂದು ಕೇಜ್ರಿವಾಲ್ ಸಾರ್ವಜನಿಕರಿಗೆ ಮನವಿ ಮಾಡಿದರು.
"ನಮ್ಮ ಪಕ್ಷದ ಯಾವುದೇ ಅಭ್ಯರ್ಥಿ ಹಣ ಅಥವಾ ಸರಕುಗಳನ್ನು ವಿತರಿಸುವ ಮೂಲಕ ಮತಗಳನ್ನು ಖರೀದಿಸಲು ಪ್ರಯತ್ನಿಸಿದರೆ, ಅವರಿಗೂ ಮತ ಹಾಕಬೇಡಿ. ಈ ಭ್ರಷ್ಟ ವ್ಯವಸ್ಥೆ ಕೊನೆಗೊಳಿಸುವುದು ನಮ್ಮ ಗುರಿ. ಸಾರ್ವಜನಿಕರಿಗೆ ನನ್ನ ಮನವಿ ಏನೆಂದರೆ, ಯಾವುದೇ ಬೆಲೆ ತೆತ್ತಾದರೂ ತಮ್ಮ ಮತಗಳನ್ನು ಮಾರಾಟ ಮಾಡಲು ಬಿಡಬೇಡಿ" ಎಂದು ಸ್ಪಷ್ಟವಾಗಿ ಹೇಳಿದರು.
ರಾಹುಲ್ ಗಾಂಧಿ ವಿರುದ್ಧ ಕೇಜ್ರಿವಾಲ್ ಪ್ರತಿದಾಳಿ: ರಾಹುಲ್ ಗಾಂಧಿ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅರವಿಂದ್ ಕೇಜ್ರಿವಾಲ್, "ಕಾಂಗ್ರೆಸ್ ಸ್ವತಃ ಇದಕ್ಕೆ ಪ್ರತಿಕ್ರಿಯಿಸದ ಕಾರಣ ನಾನು ಇದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ, ಹಿರಿಯ ಬಿಜೆಪಿ ನಾಯಕರೊಬ್ಬರು ಅದಕ್ಕೆ ಉತ್ತರಿಸಿದ್ದಾರೆ. ಇದು ಆಮ್ ಆದ್ಮಿ ಪಕ್ಷದ ವಿರುದ್ಧ ಬಿಜೆಪಿ ಮತ್ತು ಕಾಂಗ್ರೆಸ್ ಒಟ್ಟಾಗಿ ಚುನಾವಣೆಯಲ್ಲಿ ಹೋರಾಡುತ್ತಿವೆ ಎಂಬುದನ್ನು ಸಾಬೀತುಪಡಿಸುತ್ತಿದೆ. ಈ ಚುನಾವಣೆಯಲ್ಲಿ ಎರಡೂ ಪಕ್ಷಗಳ ನಡುವಿನ ಮೈತ್ರಿ ಬಹಿರಂಗವಾಗಿದೆ" ಎಂದು ಹೇಳಿದರು.
ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೆ ಬಂದರೆ ದೆಹಲಿ ಕೊಳೆಗೇರಿಗಳೆಲ್ಲ ನೆಲಸಮ: ಅರವಿಂದ್ ಕೇಜ್ರಿವಾಲ್