ಅಹಮದಾಬಾದ್ (ಗುಜರಾತ್): ಇಲ್ಲಿನ ಹಲವು ಶಾಲೆಗಳಿಗೆ ಸೋಮವಾರ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಮೇಲ್ ಬಂದಿವೆ. ಸೋಮವಾರ ಇಮೇಲ್ ಮೂಲಕ ಶಾಲೆಗಳಿಗೆ ಬಾಂಬ್ ಬೆದರಿಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಅಹಮದಾಬಾದ್ ಡಿಸಿಪಿ ಸೈಬರ್ ಕ್ರೈಂ ಬ್ರಾಂಚ್ ಲವೀನಾ ಸಿನ್ಹಾ ಪ್ರತಿಕ್ರಿಯಿಸಿ, ಭಯಪಡುವ ಅಗತ್ಯವಿಲ್ಲ. ಕೆಲವು ಶಾಲೆಗಳಿಗೆ ಬಾಂಬ್ ಸ್ಫೋಟದ ಬೆದರಿಕೆಯ ಇಮೇಲ್‌ಗಳು ಬಂದಿವೆ. ಇಲ್ಲಿಯವರೆಗೆ, ಆರು ಶಾಲೆಗಳು ಅಂತಹ ಇಮೇಲ್‌ಗಳನ್ನು ಸ್ವೀಕರಿಸಿವೆ ಮತ್ತು ಅದರ ಬಗ್ಗೆ ನಮಗೆ ತಿಳಿಸಿವೆ. ಇದು ಕೆಲವು ದಿನಗಳ ಹಿಂದೆ ದೆಹಲಿಯ ಶಾಲೆಗಳಿಗೆ ಬಂದ ಬಾಂಬ್ ಬೆದರಿಕೆಯ ಮಾದರಿಯಲ್ಲಿದೆ. ನಾವು ತನಿಖೆ ನಡೆಸುತ್ತಿದ್ದೇವೆ. ನಾಳೆ ಮತದಾನದ ದಿನವಾಗಿರುವುದರಿಂದ ಜನರು ಗಾಬರಿಯಾಗಬಾರದು ಎಂದು ಹೇಳಿದರು.
ನಮ್ಮ ಪ್ರಾಥಮಿಕ ತನಿಖೆಯ ಪ್ರಕಾರ, ಇಮೇಲ್‌ನ ಡೊಮೇನ್ ಭಾರತದಿಂದ ಹೊರಗಿದೆ. ಸ್ಥಳೀಯ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಮತ್ತು ಅಪರಾಧ ವಿಭಾಗದ ಸಿಬ್ಬಂದಿ ಶಾಲೆಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಗುಜರಾತ್‌ನ 25 ಲೋಕಸಭಾ ಕ್ಷೇತ್ರಗಳಿಗೆ ಮಂಗಳವಾರ ಮತದಾನ ನಡೆಯಲಿದೆ. ದೆಹಲಿಯ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿದ ಕೆಲವೇ ದಿನಗಳಲ್ಲಿ ಈ ಬೆದರಿಕೆ ಬಂದಿದೆ. ಮೇ 1 ರಂದು ದೆಹಲಿಯ ಒಟ್ಟು 131 ಶಾಲೆಗಳಿಗೆ ಬೆದರಿಕೆ ಇಮೇಲ್‌ಗಳು ಬಂದಿದ್ದವು. ಬಾಂಬ್ ಬೆದರಿಕೆ ನಂತರ, ಕೆಲವು ಶಾಲೆಗಳನ್ನು ಮುಚ್ಚಲಾಗಿತ್ತು.
ಆದರೂ, ಗೃಹ ವ್ಯವಹಾರಗಳ ಸಚಿವಾಲಯ (MHA) ಇಮೇಲ್ ಅನ್ನು ಸುಳ್ಳು ಕರೆ ಎಂದು ಅಧಿಕೃತ ಹೇಳಿಕೆಯನ್ನು ನೀಡಿತ್ತು. ಭಯಪಡುವ ಅಗತ್ಯವಿಲ್ಲ ಎಂದು ಗೃಹ ಸಚಿವಾಲಯದ ಅಧಿಕೃತ ಪ್ರಕಟಣೆ ತಿಳಿಸಿತ್ತು. ಈ ಮೇಲ್ ಸುಳ್ಳು ಎಂದು ತೋರುತ್ತಿದೆ. ದೆಹಲಿ ಪೊಲೀಸರು ಮತ್ತು ಭದ್ರತಾ ಏಜೆನ್ಸಿಗಳು ಪ್ರೋಟೋಕಾಲ್ ಪ್ರಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಿತ್ತು.
ಓದಿ: ಕೆರೆ ಬಳಿ ಬಾಂಬ್ ಸ್ಪೋಟ: ಬಾಲಕ ಸಾವು, ಇಬ್ಬರು ಮಕ್ಕಳಿಗೆ ಗಾಯ - Bomb Blast