ಅಯೋಧ್ಯೆ, ಉತ್ತರಪ್ರದೇಶ: ಅಯೋಧ್ಯೆಯಲ್ಲಿ ಎಂಟನೇ ಆವೃತ್ತಿಯ ದೀಪೋತ್ಸವಕ್ಕೆ ಸಿದ್ಧತೆಗಳು ಅಂತಿಮ ಹಂತದಲ್ಲಿದ್ದು, ಅಕ್ಟೋಬರ್ 30 ರಂದು ನಗರದಾದ್ಯಂತ 28 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸುವ ಯೋಜನೆಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಪ್ರಶಾಂತ್ ಕುಮಾರ್ ಅವರ ಮೇಲ್ವಿಚಾರಣೆಯಲ್ಲಿ ಪೊಲೀಸ್ ಮತ್ತು ಸ್ಥಳೀಯ ಆಡಳಿತವು ದೀಪೋತ್ಸವ ಆಚರಣೆಗಾಗಿ ಸೂಕ್ತ ಭದ್ರತಾ ಕ್ರಮಗಳನ್ನು ಜಾರಿಗೆ ತಂದಿವೆ.
ಸಿದ್ಧತೆಗಳ ಬಗ್ಗೆ ಮಾಹಿತಿ ಹಂಚಿಕೊಂಡ ಸಿಎಂ: ದೀಪೋತ್ಸವದ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಚೇರಿ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, "ದೀಪೋತ್ಸವದ ಸಿದ್ಧತೆಗಳು ಅಂತಿಮ ಹಂತದಲ್ಲಿವೆ. ದೀಪಗಳನ್ನು ಇರಿಸುವ ಕೆಲಸ ನಡೆಯುತ್ತಿದೆ... ಲೇಸರ್, ಧ್ವನಿ ಮತ್ತು ಡ್ರೋನ್ ಪ್ರದರ್ಶನಗಳ ಪ್ರಯೋಗಗಳು ಪ್ರಗತಿಯಲ್ಲಿವೆ. ದೇವಾಲಯದಲ್ಲಿ ರಾಮ್ ಲಲ್ಲಾ ವಿಗ್ರಹವನ್ನು ಪ್ರತಿಷ್ಠಾಪಿಸಿದ ನಂತರ ಇದು ಮೊದಲ ದೀಪೋತ್ಸವವಾಗಿರುವುದರಿಂದ ಈ ವರ್ಷದ ಕಾರ್ಯಕ್ರಮವು ವಿಶೇಷ ಮಹತ್ವ ಹೊಂದಿದೆ" ಎಂದು ಬರೆದಿದ್ದಾರೆ.
ಆರು ದೇಶಗಳ ಕಲಾವಿದರಿಂದ ಪ್ರದರ್ಶನ: ಮ್ಯಾನ್ಮಾರ್, ನೇಪಾಳ, ಥಾಯ್ಲೆಂಡ್, ಮಲೇಷ್ಯಾ, ಕಾಂಬೋಡಿಯಾ ಮತ್ತು ಇಂಡೋನೇಷ್ಯಾ ಹೀಗೆ ಆರು ದೇಶಗಳ ಕಲಾವಿದರು ಪ್ರದರ್ಶನಗಳನ್ನು ನೀಡಲಿದ್ದು, ಉತ್ತರಾಖಂಡದ ರಾಮ್ ಲೀಲಾ ಪ್ರಸ್ತುತಿಯೊಂದಿಗೆ ಪವಿತ್ರ ನಗರದ ಆಧ್ಯಾತ್ಮಿಕ, ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ಸಾರವನ್ನು ಪ್ರದರ್ಶಿಸುವ ಗುರಿಯನ್ನು ದೀಪೋತ್ಸವ ಹೊಂದಿದೆ. ಇದಲ್ಲದೇ, ವಿವಿಧ ರಾಜ್ಯಗಳ ಕಲಾವಿದರು ಈ ಕಾರ್ಯಕ್ರಮದಲ್ಲಿ ತಮ್ಮ ಪ್ರದರ್ಶನ ನೀಡಲಿದ್ದಾರೆ.
ಪಶುಸಂಗೋಪನಾ ಇಲಾಖೆಯು ಹಬ್ಬದ ಸಮಯದಲ್ಲಿ 1,50,000 "ಗೋ ದೀಪ್" ಗಳನ್ನು ಬೆಳಗಿಸಲು ಪ್ರತಿಜ್ಞೆ ಮಾಡಿದೆ. ಪಶುಸಂಗೋಪನಾ ಸಚಿವ ಧರ್ಮಪಾಲ್ ಸಿಂಗ್ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಗೋ ದೀಪ್ ಅನ್ನು ಸಾಂಕೇತಿಕವಾಗಿ ನೀಡಿದರು.
ಸ್ವಚ್ಛತೆ ಮತ್ತು ಪರಿಸರ ಜಾಗೃತಿಗಾಗಿ ರಾಮ ಜನ್ಮಭೂಮಿ ದೇವಾಲಯದಲ್ಲಿ ಕಡಿಮೆ ಹೊಗೆ ಮತ್ತು ಕಡಿಮೆ ಮಾಲಿನ್ಯದ ವಿಶೇಷ ದೀಪಗಳನ್ನು ಬಳಸಲಾಗುವುದು. ವಿಶೇಷವಾಗಿ ವಿನ್ಯಾಸಗೊಳಿಸಲಾದ ಈ ದೀಪಗಳು ದೇವಾಲಯದ ಗೋಡೆಗಳಿಗೆ ಕಲೆಯಾಗದಂತೆ ರಕ್ಷಿಸುತ್ತವೆ ಮತ್ತು ಹೆಚ್ಚು ಅವಧಿಯವರೆಗೆ ಬೆಳಗುತ್ತವೆ ಎಂದು ರಾಜ್ಯ ಸರ್ಕಾರದ ವಕ್ತಾರರು ಹೇಳಿದರು.
ಹೂವುಗಳಿಂದ ದೇವಾಲಯದ ಸಂಕೀರ್ಣ ಅಲಂಕಾರ: ಇಡೀ ದೇವಾಲಯದ ಸಂಕೀರ್ಣವನ್ನು ಹೂವುಗಳಿಂದ ಅಲಂಕರಿಸಲಾಗುವುದು ಮತ್ತು ಈ ವರ್ಷದ ದೀಪೋತ್ಸವದ ಸಮಯದಲ್ಲಿ ಪರಿಸರ ಸಂರಕ್ಷಣೆಯ ಸಂದೇಶವನ್ನು ತಲುಪಿಸುವ ಪ್ರಯತ್ನಗಳನ್ನು ಮಾಡಲಾಗುವುದು. ಅಕ್ಟೋಬರ್ 30 ರಂದು 30 ಸಾವಿರಕ್ಕೂ ಅಧಿಕ ಸ್ವಯಂಸೇವಕರು ಘಾಟ್ಗಳಲ್ಲಿ ದೀಪಗಳನ್ನು ಉರಿಸಿ ಅಲಂಕರಿಸಲಿದ್ದಾರೆ. ರಾಮ್ ಕಿ ಪೈಡಿಗೆ ಹೋಗುವ 17 ಮಾರ್ಗಗಳಲ್ಲಿ ಸಾರ್ವಜನಿಕರ ಸಂಚಾರ ನಿರ್ಬಂಧಿಸಲಾಗಿದ್ದು, ಪಾಸ್ ಹೊಂದಿರುವವರಿಗೆ ಮಾತ್ರ ಪ್ರವೇಶ ನೀಡಲಾಗುವುದು. ಸುವ್ಯವಸ್ಥೆ ಕಾಪಾಡಲು ಈ ಮಾರ್ಗಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು.
ಇದನ್ನೂ ಓದಿ : ಬಾಯಿ ಚಪ್ಪರಿಸಿ ತಿನ್ನುವ ಗೋಲ್ಗಪ್ಪ - ಪಾನಿಪುರಿಯಲ್ಲಿ ಶೌಚಾಲಯ ಶುಚಿಗೊಳಿಸುವ ಹೈಡ್ರೋಕ್ಲೋರಿಕ್ ಆಸಿಡ್ ಪತ್ತೆ!