ಲಡಾಕ್‌ನ ಪ್ಯಾಂಗೊಂಗ್ ತ್ಸೋ ತೀರದಲ್ಲಿ ತಂದೆಗೆ ರಾಹುಲ್ ಗಾಂಧಿ ನಮನ- ವಿಡಿಯೋ
🎬 Watch Now: Feature Video
ಲಡಾಖ್: ಇಂದು ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿ ಅವರ 79ನೇ ಜನ್ಮದಿನಾಚರಣೆ. ಈ ಹಿನ್ನೆಲೆಯಲ್ಲಿ ಬೆಳಗ್ಗೆ ಲಡಾಕ್‌ನ ಪ್ಯಾಂಗೊಂಗ್ ಸರೋವರ ದಡದಲ್ಲಿ ಪ್ರಾರ್ಥನಾ ಸಭೆ ನಡೆಯಿತು. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಸಮುದ್ರ ಮಟ್ಟದಿಂದ ಸುಮಾರು 1,400 ಅಡಿ ಎತ್ತರದಲ್ಲಿರುವ ಪ್ಯಾಂಗೊಂಗ್ ತ್ಸೋ ತೀರದಲ್ಲಿ ತಮ್ಮ ತಂದೆಗೆ ಗೌರವ ನಮನ ಸಲ್ಲಿಸಿದರು. ರಾಹುಲ್ ಶನಿವಾರ ಪ್ಯಾಂಗೊಂಗ್ ಸರೋವರಕ್ಕೆ ಬೈಕ್‌ನಲ್ಲಿ ಪ್ರಯಾಣ ಬೆಳೆಸಿದ್ದರು. 2019ರಲ್ಲಿ 370 ಮತ್ತು 35 (ಎ) ವಿಧಿ ರದ್ದುಗೊಳಿಸಿದ ಬಳಿಕ ಇದು ಅವರ ಮೊದಲ ಲಡಾಖ್ ಭೇಟಿಯಾಗಿದೆ.
ರಾಜೀವ್ ಗಾಂಧಿ ಆಗಸ್ಟ್ 20,1944 ರಂದು ಜನಿಸಿದರು. 1984ರಿಂದ 1989ರವರೆಗೆ ಭಾರತದ 7ನೇ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಹಲವು ಕಾಂಗ್ರೆಸ್ ನಾಯಕರು ಮತ್ತು ಪಕ್ಷದ ಕಾರ್ಯಕರ್ತರು ರಾಷ್ಟ್ರ ರಾಜಧಾನಿಯಲ್ಲಿ ಗೌರವ ಸಲ್ಲಿಸಿದರು. ರಾಜೀವ್ ಗಾಂಧಿ ಸಮಾಧಿ ಇರುವ ವೀರ ಭೂಮಿಯಲ್ಲಿ ಪತ್ನಿ ಸೋನಿಯಾ ಗಾಂಧಿ ಶ್ರದ್ಧಾಂಜಲಿ ಸಲ್ಲಿಸಿದರು. ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಜ್ಯಸಭಾ ಸಂಸದ ಕೆ.ಸಿ.ವೇಣುಗೋಪಾಲ್ ಈ ವೇಳೆ ಉಪಸ್ಥಿತರಿದ್ದರು.
ಪ್ರಧಾನಿ ನರೇಂದ್ರ ಮೋದಿ ಕೂಡ ಗೌರವ ನಮನ ಸಲ್ಲಿಸಿದ್ದಾರೆ. "ಮಾಜಿ ಪ್ರಧಾನಿ ರಾಜೀವ್ ಗಾಂಧಿಜಿ ಅವರಿಗೆ ನನ್ನ ನಮನಗಳು" ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ (ಟ್ವಿಟ್ಟರ್) ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ರಾಜೀವ್ ಗಾಂಧಿ 79ನೇ ಜನ್ಮದಿನ: 'ವೀರ ಭೂಮಿ'ಗೆ ಸೋನಿಯಾ, ಪ್ರಿಯಾಂಕಾ, ಖರ್ಗೆ ಪುಷ್ಪ ನಮನ