'ಫಸ್ಟ್ ರ‍್ಯಾಂಕ್ ರಾಜು' ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಗುರುನಂದನ್ ಈಗ 'ರಾಜು ಜೇಮ್ಸ್ ಬಾಂಡ್' ಎಂಬ ಚಿತ್ರ ಮಾಡುತ್ತಿರುವುದು ಗೊತ್ತೇ ಇದೆ. ಚಿತ್ರತಂಡವು ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ. ಚಿತ್ರದ ಮೋಷನ್ ಪೋಸ್ಟರ್ ಅನಾವರಣಗೊಳಿಸಿ ಪ್ರಚಾರಕ್ಕೆ ಚಾಲನೆ ನೀಡಿದ ನಿರ್ಮಾಪಕರಾದ ಮಂಜುನಾಥ್ ವಿಶ್ವಕರ್ಮ (ಲಂಡನ್) ಮತ್ತು ಕಿರಣ್ ಭರ್ತೂರು (ಕೆನಡಾ) ಕೆಲ ವಿಚಾರಗಳನ್ನು ಹಂಚಿಕೊಂಡರು.
ನಿರ್ದೇಶಕ ದೀಪಕ್ ಮಧುವನಹಳ್ಳಿ ಮಾತನಾಡಿ, ''ರಾಜು ಜೇಮ್ಸ್ ಬಾಂಡ್ ಚಿತ್ರದಲ್ಲಿ ನೀವು ಫಸ್ಟ್ ರ‍್ಯಾಂಕ್ ರಾಜು ಗುರುನಂದನ್ನನ್ನು ನೋಡುವುದಿಲ್ಲ. ಆ ಜಾನರ್ನಿಂದ ಅವರನ್ನು ಆಚೆಗೆ ಕರೆ ತಂದಿದ್ದೇವೆ. ಈ ಚಿತ್ರವು ನೋಡುಗನಿಗೆ ಯಾವುದೇ ಅಶ್ಲೀಲ ಸಂಭಾಷಣೆ ಇಲ್ಲದ ಪರಿಶುದ್ಧ ಮನೋರಂಜನೆ ನೀಡುತ್ತದೆ. ಎರಡು ಕಾಲು ಗಂಟೆಗಳ ಚಿತ್ರದಲ್ಲಿ ಮುಕ್ಕಾಲು ಗಂಟೆ ನೀವು ನಗುವಿಗೆ ಮೀಸಲಿಡಬೇಕು. ಈ ವರ್ಷದ ಕೊನೆಯನ್ನು ನಗುನಗುತ್ತಾ ಸಂಭ್ರಮಿಸಿ ನೂತನ ವರ್ಷವನ್ನು ಸ್ವಾಗತಿಸೋಣ'' ಎಂದರು.
ಬಳಿಕ ನಟ ಗುರುನಂದನ್ ಮಾತನಾಡಿ, ''ನನ್ನ ಹೆಸರು ಎಷ್ಟೋ ಜನರಿಗೆ ಗೊತ್ತಿಲ್ಲ. ನಾನು ಹೋದ ಕಡೆಯಲ್ಲೆಲ್ಲಾ ಫಸ್ಟ್ ರ‍್ಯಾಂಕ್ ರಾಜು ಅಂತಲೇ ಗುರುತಿಸುತ್ತಾರೆ. ಈ ಚಿತ್ರದ ನಿರ್ದೇಶಕರು ನನ್ನ ಹಿಂದಿನ ಜಾನರ್ಗೆ ಬ್ರೇಕ್ ಹಾಕಿದ್ದಾರೆ. ನನ್ನ ಕೈಯಲ್ಲಿ ಡ್ಯಾನ್ಸ್, ಆಕ್ಷನ್ ಮಾಡಿಸಿದ್ದಾರೆ. ನಿರ್ಮಾಪಕರು ಯಾವುದೇ ಕೊರತೆ ಇಲ್ಲದ ಹಾಗೆ ಸಿನಿಮಾ ಮಾಡಿದ್ದಾರೆ. ಈ ಸಿನಿಮಾ ನಿಜಕ್ಕೂ ನೋಡುಗರಿಗೆ ಎಂಟರ್ಟೈನ್ ಮಾಡುತ್ತೆ ಎಂಬ ವಿಶ್ವಾಸವಿದೆ'' ಅಂದರು.
ಕನ್ನಡದ ಜೊತೆಗೆ ಹಿಂದಿಯಲ್ಲೂ ಬಿಡುಗಡೆ: ''ನಿರ್ದೇಶಕ ದೀಪಕ್ ಮಧುವನಹಳ್ಳಿ ಪರಿಶುದ್ಧ ಮನೋರಂಜನೆಯ ಚಿತ್ರವೊಂದನ್ನು ನಿರ್ದೇಶಿಸಿದ್ದಾರೆ. ಅದಕ್ಕೆ ಕಲಾವಿದರು, ತಂತ್ರಜ್ಞರು ಸಾಥ್ ನೀಡಿದ್ದಾರೆ. ನಗುವೇ ಪ್ರಧಾನವಾಗಿರುವ ಈ ನಮ್ಮ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಾರೆ ಎಂಬ ಭರವಸೆಯಿದೆ. ನೋಡುಗರು ಕೊಟ್ಟ ದುಡ್ಡಿಗೆ ಮೋಸ ಮಾಡದ ಸಿನಿಮಾವಿದು ಎಂದು ಧೈರ್ಯವಾಗಿ ಹೇಳುತ್ತೇವೆ. ಕನ್ನಡದ ಜೊತೆಗೆ ಹಿಂದಿಯಲ್ಲೂ ನಮ್ಮ ಸಿನಿಮಾ ಬಿಡುಗಡೆಯಾಗುತ್ತಿದೆ'' ಎಂದು ನಿರ್ಮಾಪಕ ಮಂಜುನಾಥ್ ವಿಶ್ವಕರ್ಮ ಹೇಳಿದರು.
ಚಿತ್ರದಲ್ಲಿ ಗುರುನಂದನ್ ಜೊತೆಗೆ ಮೃದುಲಾ ಜೋಡಿಯಾಗಿದ್ದಾರೆ. ಇವರ ಜೊತೆ ರವಿಶಂಕರ್, ಚಿಕ್ಕಣ್ಣ, ಸಾಧುಕೋಕಿಲ, ಅಚ್ಯುತ ಕುಮಾರ್, ಜೈಜಗದೀಶ್ ಹೀಗೆ ಅನುಭವಿ ಕಲಾವಿದರ ದೊಡ್ಡ ತಾರಾಬಳಗವೇ ಇದೆ. ಕರ್ಮ ಬ್ರೋಸ್ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗಿರುವ ಚಿತ್ರಕ್ಕೆ ಮನೋಹರ ಜೋಶಿ ಕ್ಯಾಮರಾ ವರ್ಕ್ ಇದೆ. ಸಿನಿಮಾದಲ್ಲಿ ನಾಲ್ಕು ಹಾಡುಗಳಿದ್ದು, ಎರಡು ಹಾಡುಗಳಿಗೆ ಭಾರತದಲ್ಲಿ ನೃತ್ಯ ಸಂಯೋಜನೆ ಮಾಡಿದ್ದರೆ, ಮತ್ತೆರಡು ಹಾಡುಗಳು ಲಂಡನ್ನಲ್ಲಿ ಚಿತ್ರೀಕರಣಗೊಂಡಿವೆ. ಸದ್ಯ ಟೈಟಲ್ನಿಂದಲೇ ಗಮನ ಸೆಳೆಯುತ್ತಿರುವ 'ರಾಜು ಜೇಮ್ಸ್ ಬಾಂಡ್' ಸಿನಿಮಾ ಡಿಸೆಂಬರ್ 27ರಂದು ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.
ಇದನ್ನೂ ಓದಿ: ಆಟೋ ಚಾಲಕರ ಜೊತೆಗೂಡಿ ವಿಭಿನ್ನವಾಗಿ ಶಂಕರ್ನಾಗ್ ಸ್ಮರಿಸಿದ 'ಮರ್ಯಾದೆ ಪ್ರಶ್ನೆ' ಚಿತ್ರತಂಡ