ಚಿಕ್ಕಮಗಳೂರು: ಅರಣ್ಯಕ್ಕೆ ಕಿಡಿಗೇಡಿಗಳಿಂದ ಬೆಂಕಿ; ನೂರಾರು ಎಕರೆ ವನ್ಯಸಂಪತ್ತು ನಾಶ
🎬 Watch Now: Feature Video
ಚಿಕ್ಕಮಗಳೂರು: ಅರಣ್ಯಕ್ಕೆ ಕಿಡಿಗೇಡಿಗಳು ಬೆಂಕಿ ಇಟ್ಟ ಪರಿಣಾಮ ನೂರಾರು ಎಕರೆ ಪ್ರದೇಶ ಹೊತ್ತಿ ಉರಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ನಡೆದಿದೆ. ಚಾರ್ಮಾಡಿ ಘಾಟಿಗೆ ಹೊಂದಿಕೊಂಡಂತಿರುವ ಆಲೇಖಾನ್ ಹೊರಟ್ಟಿ ಅರಣ್ಯ ಪ್ರದೇಶದಲ್ಲಿ ಪ್ರಾಣಿ-ಪಕ್ಷಿಗಳು ಬೆಂಕಿಗಾಹುತಿಯಾಗಿವೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಬೆಂಕಿ ನಂದಿಸಲು ಹರಸಾಹಸಪಟ್ಟರು. ಅರಣ್ಯಾಧಿಕಾರಿಗಳಿಗೆ ಸ್ಥಳೀಯರು ಸಾಥ್ ನೀಡಿದರು.
ಗುಡ್ಡದ ಎತ್ತರದ ಪ್ರದೇಶದಲ್ಲಿ ಬೆಂಕಿ ಬಿದ್ದಿದ್ದು ಅಗ್ನಿಶಾಮಕ ಸಿಬ್ಬಂದಿ ಹಾಗೂ ವಾಹನಗಳು ತೆರಳಲು ಸಾಧ್ಯವಾಗಲಿಲ್ಲ. ಇಲಾಖೆ ಸಿಬ್ಬಂದಿ ಜೊತೆ ಸೇರಿ ಸ್ಥಳೀಯರು ಮರದ ರೆಂಬೆ ಕೊಂಬೆಗಳಿಂದ ಬೆಂಕಿ ಬಡಿದು ಆರಿಸಿದರು. ಚಾರ್ಮಾಡಿ ಘಾಟಿ ದಟ್ಟ ಕಾನನ. ಮಳೆಗಾಲದಲ್ಲಿ ಹಚ್ಚ ಹಸಿರಿನಿಂದ ಕೂಡಿರುವ ಅರಣ್ಯವು ಬೇಸಿಗೆಯಲ್ಲಿ ಅಷ್ಟೇ ಪ್ರಮಾಣದಲ್ಲಿ ಒಣಗಿ ನಿಂತಿರುತ್ತದೆ.
ನಿನ್ನೆ ಅರಣ್ಯ ಹೊತ್ತಿ ಉರಿಯುತ್ತಿರುವ ದೃಶ್ಯ ಬೆಂಕಿ ಬಿದ್ದ ಜಾಗದಿಂದ ಹತ್ತಾರು ಕಿ.ಮೀ ದೂರದ ಕೊಟ್ಟಿಗೆಹಾರಕ್ಕೂ ಕಾಣುತ್ತಿತ್ತು. ಪರಿಸರ ಸಂರಕ್ಷಣೆಯ ಕುರಿತು ಸರ್ಕಾರ ಎಷ್ಟೇ ಜಾಗೃತಿ ಮೂಡಿಸಿದರೂ ಕೂಡ ಆಗಾಗ್ಗೆ ಇಂತಹ ಕೃತ್ಯಗಳು ನಡೆಯುತ್ತಿರುತ್ತವೆ. ಕಿಡಿಗೇಡಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಬಂಡೀಪುರ ಕಾಡಿನಲ್ಲಿ ಬೆಂಕಿ: ಧಗಧಗಿಸುತ್ತಿದೆ ಎಕರೆಗಟ್ಟಲೇ ಭೂಮಿ