ನವದೆಹಲಿ: ಮಾಜಿ ಪ್ರಧಾನಿ, ದೇಶದ ಕಂಡ ಶ್ರೇಷ್ಠ ಅರ್ಥಶಾಸ್ತ್ರಜ್ಞ ಡಾ.ಮನಮೋಹನ್ ಸಿಂಗ್(92) ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಶನಿವಾರ ಮಧ್ಯಾಹ್ನ ರಾಷ್ಟ್ರ ರಾಜಧಾನಿ ದೆಹಲಿಯ ನಿಗಮಬೋಧ್ ಘಾಟ್‌ನಲ್ಲಿ ನೆರವೇರಿಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
"ಡಾ.ಮನಮೋಹನ್ ಸಿಂಗ್ ಅವರು ಡಿಸೆಂಬರ್ 26ರ ರಾತ್ರಿ 9.51ಕ್ಕೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು. ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುತ್ತದೆ. ಅಂತ್ಯಕ್ರಿಯೆ 11:45 ಗಂಟೆಗೆ ನಿಗಮಬೋಧ್ ಘಾಟ್‌ನಲ್ಲಿ ನಡೆಯಲಿದೆ" ಎಂದು ಸಚಿವಾಲಯ ಮಾಹಿತಿ ನೀಡಿದೆ.
ಮನಮೋಹನ್ ಸಿಂಗ್ ವಯೋಸಹಜ ಕಾಯಿಲೆಯಿಂದಾಗಿ ಕೊನೆಯುಸಿರೆಳೆದಿದ್ದಾರೆ. ಮನೆಯಲ್ಲಿ ದಿಢೀರ್ ಪ್ರಜ್ಞೆ ತಪ್ಪಿದ ನಂತರ ಅವರನ್ನು ಏಮ್ಸ್‌ಗೆ ದಾಖಲಿಸಲಾಗಿತ್ತು.
ಮನಮೋಹನ್ ಸಿಂಗ್ 1932ರ ಸೆಪ್ಟೆಂಬರ್ 26ರಂದು ಜನಿಸಿದರು. ಶ್ರೇಷ್ಠ ಅರ್ಥಶಾಸ್ತ್ರಜ್ಞ ಮಾತ್ರವಲ್ಲದೇ 1982-1985ರವರೆಗೆ ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್ ಆಗಿಯೂ ಸೇವೆ ಸಲ್ಲಿಸಿದ್ದರು. 2004-2014ರ ಅವಧಿಯಲ್ಲಿ ದೇಶದ 13ನೇ ಪ್ರಧಾನಿಯಾಗಿದ್ದರು.
ಹಣಕಾಸು ಸಚಿವರಾಗಿ 1991 ಮತ್ತು 1996ರ ನಡುವೆ ಐದು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದರು. ಆರ್ಥಿಕ ಸುಧಾರಣೆಗಳ ಸಮಗ್ರ ನೀತಿಯನ್ನು ಪರಿಚಯಿಸುವಲ್ಲಿ ಅವರ ಪಾತ್ರವನ್ನು ವಿಶ್ವಾದ್ಯಂತ ಗುರುತಿಸಲಾಗಿದೆ.
ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (NREGA) ಪರಿಚಯಿಸಿತು. ಅದು ನಂತರ MGNREGA ಎಂದು ಕರೆಯಲ್ಪಟ್ಟಿತು.
ಮಾಹಿತಿ ಹಕ್ಕು ಕಾಯಿದೆ (RTI)- 2005 ಅನ್ನು ಡಾ.ಸಿಂಗ್ ಸರ್ಕಾರದ ಅಡಿಯಲ್ಲಿ ಅಂಗೀಕರಿಸಲಾಗಿತ್ತು. ಇದು ಸರ್ಕಾರ ಮತ್ತು ಸಾರ್ವಜನಿಕರ ನಡುವಿನ ಮಾಹಿತಿಯ ಪಾರದರ್ಶಕತೆಯನ್ನು ಉತ್ತಮಗೊಳಿಸಿತು. 33 ವರ್ಷಗಳ ಸೇವೆಯ ನಂತರ ಈ ವರ್ಷಾರಂಭದಲ್ಲಿ ರಾಜ್ಯಸಭೆಯಿಂದ ನಿವೃತ್ತರಾದರು.