ಬೆಂಗಳೂರು: ಆರು ವರ್ಷಕ್ಕಿಂತಲೂ ಸಣ್ಣ ಮಕ್ಕಳು ತನ್ನ ತಾಯಿಯೊಂದಿಗೆ ನೆಲೆಸುವುದೇ ಸೂಕ್ತ ಎಂದು ಪ್ರತಿಪಾದಿಸಿರುವ ಹೈಕೋರ್ಟ್, ದುಬೈನಲ್ಲಿ ನೆಲೆಸಿರುವ ಘಾನ ದೇಶದ ಪ್ರಜೆ(ತಂದೆ)ಗೆ ಬೆಂಗಳೂರಿನಲ್ಲಿ ತಾಯಿಯೊಂದಿಗಿರುವ ನಾಲ್ಕು ವರ್ಷದ ಮಗುವನ್ನು ಹಸ್ತಾಂತರ ಮಾಡಲು ನಿರಾಕರಿಸಿದೆ.
ಈ ಸಂಬಂಧ ದುಬೈ ನ್ಯಾಯಾಲಯದ ನಿರ್ದೇಶನದಂತೆ ಮಗುವನ್ನು ತನ್ನ ವಶಕ್ಕೆ ನೀಡುವುದಕ್ಕೆ ಸೂಚಿಸಬೇಕು ಎಂದು ಕೋರಿ ಘಾನಾದ ಪ್ರಜೆಯಾಗಿರುವ ಪ್ರಿನ್ಸಿಸ್ ರಿಚರ್ಡ್ ಕೋಫಿ ಅಟಿಗ್ಬ್ರೋ ಎಂಬುವರು ಹೆಬಿಯಾಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನು ಸಿವರಾಮನ್ ಮತ್ತು ನ್ಯಾಯಮೂರ್ತಿ ಉಮೇಶ್ ಅಡಿಗ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೆ, ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳಲು ಸಲಹೆ ನೀಡಿದೆ.
ಮಗುವಿಗೆ ಐದು ವರ್ಷಕ್ಕಿಂತಲೂ ಕಡಿಮೆ ವಯಸ್ಸಾಗಿದ್ದು, ತಾಯಿಯೊಂದಿಗೆ ನೆಲೆಸಿದೆ. ಮಗುವಿನ ರಕ್ಷಣೆ ಕುರಿತು ಅರ್ಜಿದಾರರಿಗೆ ಯಾವುದೇ ಆತಂಕವಿಲ್ಲ. ಪ್ರಕರಣದಲ್ಲಿ ಮಗುವಿನ ವಶಕ್ಕೆ ಪಡಿಯುವುದಕ್ಕಾಗಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ಮಗುವಿನ ಹಿತಾಸಕ್ತಿಯಿಂದ ಆ ನ್ಯಾಯಾಲಯದಲ್ಲಿ ನಿರ್ಧಾರವಾಗಬೇಕಾಗಿದೆ. ಅರ್ಜಿದಾರರು ದುಬೈನಲ್ಲಿ ನೆಲೆಸಿದ್ದು, ಕೌಟುಂಬಿಕ ನ್ಯಾಯಾಲಯಕ್ಕೆ ಸೂಕ್ತ ಮನವಿ ಮಾಡುವ ಮೂಲಕ ವಿಡಿಯೋ ಕಾನ್ಫೆರೆನ್ಸ್ ಮೂಲಕ ಹಾಜರಾಗಿ ತಮ್ಮ ಮನವಿಯನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಿ ಪೀಠ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ವಿಚಾರಣೆ ವೇಳೆ ತಾಯಿಯ ಪರ ವಕೀಲರು, ದಂಪತಿ ವಿದೇಶಿ ವಿವಾಹ ಕಾಯಿದೆ 1969ರ ಅಡಿಯಲ್ಲಿ ವಿವಾಹವಾಗಿದ್ದಾರೆ. ಆದರೆ, ಷರಿಯಾ ಕಾನೂನು ಆಧಾರದಲ್ಲಿ ಮಗುವನ್ನು ಅರ್ಜಿದಾರ(ತಂದೆ) ವಶಕ್ಕೆ ನೀಡುವಂತೆ ದುಬೈ ನ್ಯಾಯಾಲಯ ಆದೇಶಿಸಿದೆ. ಆದರೆ, ದಂಪತಿ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ್ದಾಗಿದ್ದು, ಅವರಿಗೆ ಅನ್ವಯವಾಗುವುದಿಲ್ಲ ಎಂದು ಪೀಠಕ್ಕೆ ತಿಳಿಸಿದ್ದರು.
ಪ್ರಕರಣದ ಹಿನ್ನೆಲೆ: ಘಾನಾ ದೇಶದ ಮೂಲದವರಾದ ದುಬೈ ನಿವಾಸಿಯಾಗಿರುವ ಅರ್ಜಿದಾರರು ಭಾರತೀಯ ಪ್ರಜೆಯಾದ ಜುಡ್ತಿ ಜಾಸೆಫಿನ್ ಎಂಬುವರನ್ನು ವಿದೇಶಿ ವಿವಾಹ ಕಾಯಿದೆಯಡಿ 2018ರ ಏಪ್ರಿಲ್ ತಿಂಗಳಲ್ಲಿ ವಿವಾಹವಾಗಿದ್ದು, ದುಬೈನ ಭಾರತೀಯ ರಾಯಭಾರ ಕಚೇರಿಯಲ್ಲಿ ವಿವಾಹ ನೋಂದಾಯಿಸಿಕೊಂಡಿದ್ದರು. ದಂಪತಿಗೆ 3.9 ವರ್ಷದ ಮಗು ಇದೆ. ಈ ನಡುವೆ ದಂಪತಿಯ ನಡುವಿನ ಮನಸ್ತಾಪದಿಂದ ಪತ್ನಿ ದುಬೈನಿಂದ ಕತಾರ್, ಅಲ್ಲಿಂದ ಮಸ್ಕತ್ ಮತ್ತು ಬೆಂಗಳೂರಿಗೆ ಬಂದಿದ್ದರು.
ಈ ನಡುವೆ ಅರ್ಜಿದಾರ(ಪತಿ) ಮಗುವನ್ನು ತನ್ನ ವಶಕ್ಕೆ ನೀಡಲು ಸೂಚನೆ ನೀಡುವಂತೆ ಕೋರಿ ಮಸ್ಕತ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಜತೆಗೆ, ದುಬೈ ನ್ಯಾಯಾಲಯಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ವಿಚ್ಛೇದನ ಮಂಜೂರು ಮಾಡಿತ್ತು. ಅಲ್ಲದೆ, ಮಗುವನ್ನು ತಂದೆ(ಪತಿ) ವಶಕ್ಕೆ ನೀಡಬೇಕು ಎಂದು ಸೂಚನೆ ನೀಡಿತ್ತು. ಈ ವೇಳೆ ವಿಚಾರಣೆಗೆ ಆನ್ಲೈನ್ ಮೂಲಕ ಹಾಜರಾಗಿದ್ದ ಪತ್ನಿ, ದುಬೈ ನ್ಯಾಯಾಲಯವನ್ನು ಪ್ರಶ್ನಿಸಿರಲಿಲ್ಲ.
ಪತ್ನಿ ಮಸ್ಕತ್ ಮತ್ತು ದುಬೈ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿದ್ದಾರೆ. ಜೊತೆಗೆ ಮಗುವನ್ನು ಅಕ್ರಮ ಬಂಧನದಲ್ಲಿಸಿರಿಕೊಂಡಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ದುಬೈನಿಂದ ಬಂದಿರುವ ಪತ್ನಿ ವಿದೇಶಿ ನ್ಯಾಯಾಲಯಗಳ ಆದೇಶವನ್ನು ಉಲ್ಲಂಘಿಸಿ ಭಾರತದ ಕಾನೂನುಗಳ ಅಡಿಯಲ್ಲಿ ರಕ್ಷಣೆ ಪಡೆಯಲು ಕಾನೂನಿನಲ್ಲಿ ಅವಕಾಶವಿಲ್ಲ. ಹೀಗಾಗಿ ಮಗುವನ್ನು ನ್ಯಾಯಾಲಯದ ಮುಂದೆ ಹಾಜರಿಪಡಿಸಿ ತನ್ನ ವಶಕ್ಕೆ ನೀಡುವಂತೆ ಅದೇಶಿಸಬೇಕು ಎಂದು ತನ್ನ ಅರ್ಜಿಯಲ್ಲಿ ಕೋರಿದ್ದರು.
ಇದನ್ನೂ ಓದಿ: ಪಿಟಿಸಿಎಲ್ ಕಾಯ್ದೆಯಡಿ ಮಂಜೂರಾದ ಜಮೀನು ಮಾರಿ 12 ವರ್ಷದ ಬಳಿಕ ಹಕ್ಕು ಮರುಸ್ಥಾಪನೆಗೆ ಕೋರಿದ್ದ ಅರ್ಜಿ ವಜಾ
ಇದನ್ನೂ ಓದಿ: ಪಿತ್ರಾರ್ಜಿತ ಆಸ್ತಿಯಲ್ಲಿ ಮೃತ ಹೆಣ್ಣು ಮಕ್ಕಳಿಗೂ ಸಮಾನ ಪಾಲು: 2024ರಲ್ಲಿ ಹೈಕೋರ್ಟ್ನ ಪ್ರಮುಖ ತೀರ್ಪುಗಳು