ಭಟಿಂಡಾ(ಪಂಜಾಬ್): ಭಾರೀ ಮಳೆಯ ಪರಿಣಾಮ ಪಂಜಾಬ್‌ನ ಬಟಿಂಡಾದಲ್ಲಿ ಖಾಸಗಿ ಬಸ್ಸೊಂದುತಲ್ವಾಂಡಿ ಸಾಬೋ ರಸ್ತೆಯ ಜೀವನ್ ಸಿಂಗ್ ವಾಲಾ ಬಳಿ ಸೇತುವೆಯಿಂದ ಉರುಳಿ ಬಿದ್ದು ಭೀಕರ ಅಪಘಾತ ಸಂಭವಿಸಿದೆ. ಸರ್ದುಲ್‌ಗಢ್‌ನಿಂದ ಬಟಿಂಡಾಗೆ ತೆರಳುತ್ತಿದ್ದ ಬಸ್ನಲ್ಲಿ ಸಾಕಷ್ಟು ಪ್ರಯಾಣಿಕರು ಸಂಚರಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಘಟನೆಯಲ್ಲಿ ಮಕ್ಕಳು ಸೇರಿದಂತೆ 8 ಮಂದಿ ದಾರುಣವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ನಾಲ್ಕೈದು ಮಕ್ಕಳು ಸೇರಿದಂತೆ ಸುಮಾರು ಹನ್ನೆರಡು ಮಂದಿ ಗಾಯಗೊಂಡ ಪ್ರಯಾಣಿಕರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಬಟಿಂಡಾ ಸಿವಿಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತಕ್ಕೆ ನಿಖರ ಕಾರಣ ಗೊತ್ತಾಗಿಲ್ಲ.
ಅಪಘಾತದ ಸುದ್ದಿ ತಿಳಿದು ಎಎಪಿ ಶಾಸಕ ಜಗ್ರೂಪ್ ಸಿಂಗ್ ಗಿಲ್ ಸ್ಥಳಕ್ಕಾಗಮಿಸಿ ಸಂತಾಪ ವ್ಯಕ್ತಪಡಿಸಿದರು. ಐವರು ಸ್ಥಳದಲ್ಲೇ ಮೃತಪಟ್ಟರೆ, ಉಳಿದವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಶಾಸಕ ಗಿಲ್ ಸಿಎಂಒಗೆ ಸೂಚಿಸಿದ್ದು, ಸಂತ್ರಸ್ತರ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಕುರಿತು ಡಿಸಿ ಅವರೊಂದಿಗೆ ಮಾತನಾಡುವುದಾಗಿ ಹೇಳಿದ್ದಾರೆ. "ಎಲ್ಲಾ ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾವು ಪ್ರಾರ್ಥಿಸುತ್ತೇವೆ" ಎಂದು ಅವರು ಹೇಳಿದರು.
ಇದನ್ನೂ ಓದಿ: ಕುರ್ಲಾ ಸಾರಿಗೆ ಬಸ್ ಅಪಘಾತ: ಬ್ರೇಕ್ ಬದಲು ಕ್ಲಚ್ ಒತ್ತಿದ್ದರಿಂದ ಸಂಭವಿಸಿತಾ ದೊಡ್ಡ ಅನಾಹುತ? - KURLA BUS ACCIDENT