ಪೀಠೋಪಕರಣ ಗೋದಾಮಿನಲ್ಲಿ ಭಾರಿ ಬೆಂಕಿ ಅವಘಡ: ಓರ್ವ ಸಾವು - ಬೆಂಕಿ ಅನಾಹುತಕ್ಕೆ ಕಾರಣ
🎬 Watch Now: Feature Video
ಮುಂಬೈ(ಮಹಾರಾಷ್ಟ್ರ): ಮುಂಬೈಯ ಜೋಗೇಶ್ವರಿ ಪ್ರದೇಶದ ರಾಮಮಂದಿರ ಬಳಿಯ ಪೀಠೋಪಕರಣ ಗೋದಾಮಿನಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಅಗ್ನಿ ಅವಘಡದ ಬಗ್ಗೆ ಮಾಹಿತಿ ದೊರೆತ ತಕ್ಷಣವೇ ಘಟನಾ ಸ್ಥಳಕ್ಕೆ 8 ಅಗ್ನಿಶಾಮಕ ವಾಹನಗಳು ಧಾವಿಸಿದ್ದು, ಬೆಂಕಿಯನ್ನು ನಿಯಂತ್ರಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯಕ್ಕೆ ಈ ಅವಘಡದಲ್ಲಿ ಯಾವುದೇ ಸಾವು ನೋವುಗಳು ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಕಿ ನಂದಿಸುವ ಕಾರ್ಯ ತೀವ್ರಗತಿಯಲ್ಲಿ ನಡೆಯುತ್ತಿದ್ದು, ಇದೇ ಸಮಯದಲ್ಲಿ ಹತ್ತಿರದ ಸುಮಾರು 20ಕ್ಕೂ ಹೆಚ್ಚು ಅಂಗಡಿಗಳು ಬೆಂಕಿಯಲ್ಲಿ ಸುಟ್ಟು ಭಸ್ಮವಾಗಿವೆ. ಮುಂಬೈನ ನಾಗರಿಕ ಸಂಸ್ಥೆ BMC ಬೆಂಕಿ 3ನೇ ಹಂತದಲ್ಲಿದೆ ಎಂದು ಹೇಳಿದೆ. ಮುಂಬೈನ ಜೋಗೇಶ್ವರಿ ಪ್ರದೇಶದ ರಾಮಮಂದಿರದ ಬಳಿ ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಬೆಂಕಿ ಅನಾಹುತಕ್ಕೆ ಕಾರಣ ಏನೂ ಎಂಬುದು ಇದುವರೆಗೆ ತಿಳಿದು ಬಂದಿಲ್ಲ.
ಪ್ರಾಥಮಿಕ ವರದಿಗಳ ಪ್ರಕಾರ, ರಿಲೀಫ್ ರಸ್ತೆಯ ಘಾಸ್ ಕಾಂಪೌಂಡ್‌ನಲ್ಲಿರುವ ಪೀಠೋಪಕರಣಗಳ ಗೋಡೌನ್‌ನಲ್ಲಿ ಬೆಳಗ್ಗೆ 11 ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ. ಸ್ಥಳೀಯರು ಮೊಬೈಲ್ನಲ್ಲಿ ಸೆರೆ ಹಿಡಿದಿರುವ ಬೆಂಕಿ ಅವಘಡದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ವೈರಲ್ ಆಗುತ್ತಿವೆ.
ಇನ್ನೊಂದೆಡೆ ಮಲಾಡ್‌ನ ಆನಂದ್ ನಗರ ಪ್ರದೇಶದ ಕೊಳೆಗೇರಿಯ ಗುಡಿಸಲುಗಳಲ್ಲಿ 3 ನೇ ಹಂತದ ಬೆಂಕಿ ಕಾಣಿಸಿಕೊಂಡಿದೆ. ಮಲಾಡ್ ಪೂರ್ವದ ಆನಂದನಗರ, ಅಪ್ಪಾ ಪದಾದಲ್ಲಿ ಬೆಂಕಿ 3 ಹಂತಕ್ಕೆ ತಲುಪಿದೆ. 15-20 ಎಲ್‌ಪಿಜಿ ಸಿಲಿಂಡರ್‌ಗಳಲ್ಲಿ ಸ್ಫೋಟ ಸಂಭವಿಸಿದೆ ಮತ್ತು 12 ಮೋಟಾರ್ ಪಂಪ್‌ಗಳ 10 ಲೈನ್‌ಗಳು ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿವೆ. ಒಂದು ಮೃತ ದೇಹವನ್ನು ವಶಪಡಿಸಿಕೊಳ್ಳಲಾಗಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ನೋಡಿ: ಗುಡಿಸಲಿಗೆ ಬೆಂಕಿ: ಸುಖ ನಿದ್ರೆಯಲ್ಲಿದ್ದ ಮೂವರು ಮಕ್ಕಳು, ದಂಪತಿ ದಾರುಣ ಸಾವು