ಮಂಡ್ಯದಲ್ಲಿ ಕಾವೇರಿ ಹೋರಾಟ: ಕಪ್ಪು ಬಾವುಟ ಪ್ರದರ್ಶಿಸಿ ಕರಾಳ ದಿನಾಚರಣೆ - ಮಂಡ್ಯದಲ್ಲಿ ತೀವ್ರಗೊಂಡ ಕಾವೇರಿ ಹೋರಾಟ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/24-10-2023/640-480-19848474-thumbnail-16x9-meg.jpg)
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Oct 24, 2023, 8:15 PM IST
ಮಂಡ್ಯ: ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ರೈತರು ನಡೆಸುತ್ತಿರುವ ಧರಣಿ 50ನೇ ದಿನಕ್ಕೆ ಕಾಲಿಟ್ಟಿದೆ. ಮಂಗಳವಾರ ಹೋರಾಟಗಾರರು ಕಪ್ಪು ಬಾವುಟ ಪ್ರದರ್ಶಿಸಿ ವಿಜಯದಶಮಿಯನ್ನು ಕರಾಳ ದಿನವಾಗಿ ಆಚರಿಸಿದರು. ಸಂಜಯ್ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಬೆಂಗಳೂರು-ಮೈಸೂರು ಹೆದ್ದಾರಿ ತಡೆದರು.
ಬಳಿಕ ಕಪ್ಪು ಬಾವುಟ ಹಿಡಿದು ನಗರದ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆಯವರೆಗೆ ಮೆರವಣಿಗೆ ನಡೆಸಿದರು. ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಜತೆಗೂಡಿದ ರೈತ, ದಲಿತ, ಪ್ರಗತಿಪರ ಹಾಗೂ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿ ನೀರಿಗಾಗಿ ಮಂಡ್ಯ ಜಿಲ್ಲೆ ಸೇರಿದಂತೆ ನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಹೋರಾಟ ನಡೆಯುತ್ತಿದ್ದರೂ ಸರ್ಕಾರ ನೀರು ನಿಲ್ಲಿಸದೇ ನಿರ್ಲಕ್ಷ್ಯ ತೋರಿದ್ದು, ಈ ಮೌನ ನಡೆಯಿಂದ ಹೋರಾಟಗಾರರ ಪಾಲಿಗೆ ವಿಜಯದಶಮಿ ಕರಾಳವಾಗಿ ಪರಿಣಮಿಸಿದೆ. ಹಾಗಾಗಿ ಕಪ್ಪು ಬಾವುಟ ಪ್ರದರ್ಶಿಸಿ ಆಳುವ ಸರ್ಕಾರದ ನಡೆಯನ್ನು ಖಂಡಿಸಿದ್ದೇವೆ ಎಂದು ಅಸಮಾಧಾನ ಹೊರಹಾಕಿದರು.
ಕೃಷ್ಣರಾಜಸಾಗರ ಸೇರಿದಂತೆ ಕಾವೇರಿ ಕೊಳ್ಳದ ನಾಲ್ಕು ಜಲಾಶಯಗಳ ನಿರ್ವಹಣೆ ಹೊಣೆ ಹೊತ್ತ ರಾಜ್ಯ ಸರ್ಕಾರ ನೆರೆ ರಾಜ್ಯಕ್ಕೆ ನಿರಂತರವಾಗಿ ನೀರು ಹರಿಸುತ್ತಿರುವ ಪರಿಣಾಮ ಜಲಾಶಯಗಳು ಬರಿದಾಗುತ್ತಿವೆ. ಎರಡು ರಾಜ್ಯಗಳ ನಡುವೆ ಮಾತುಕತೆಗೆ ಮುಂದಾಗದ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ರೈತರ ಪಾಲಿಗೆ ಆಳುವ ಸರ್ಕಾರಗಳು ಕಂಟಕಪ್ರಾಯವಾಗಿದೆ ಎಂದು ಕಿಡಿ ಕಾರಿದರು. ರಾಜ್ಯ ಸರ್ಕಾರ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ಸ್ಥಗಿತ ಮಾಡಬೇಕು. ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಸಂಕಷ್ಟ ಕಾಲದಲ್ಲಿ ಪರಿಹಾರ ರೂಪಿಸಬೇಕು ಎಂದು ಒತ್ತಾಯಿಸಿದರು.
ಮಾಜಿ ಎಂಎಲ್ಸಿ ಕೆ.ಟಿ.ಶ್ರೀಕಂಠೇಗೌಡ ರೈತರ ಹೋರಾಟಕ್ಕೆ ಸಾಥ್ ನೀಡಿದರು.
ಇದನ್ನೂ ಓದಿ: ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ವಾಟಾಳ್ ಪೊಲೀಸ್ ವಶಕ್ಕೆ; ನಾಳೆ ತಮಿಳುನಾಡು ಸಿಎಂ ಭೇಟಿ