ವಕ್ಫ್ ಮಂಡಳಿಯ ಜಾಗ ಅತಿಕ್ರಮ ಸ್ವಾಧೀನ ಆರೋಪ; ವಿಲ್ಸನ್ ಗಾರ್ಡನ್ ಠಾಣೆ ಮುಂದೆ ಕೆಜಿಎಫ್ ಬಾಬು ಬೆಂಬಲಿಗರ ಪ್ರತಿಭಟನೆ - ಪೊಲೀಸ್ ಠಾಣೆ ಮುಂದೆ ಕೆಜಿಎಫ್ ಬಾಬು ಪ್ರತಿಭಟನೆ
🎬 Watch Now: Feature Video
ಬೆಂಗಳೂರು: ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ವಿ.ದೇವರಾಜ್, ಅವರ ಪುತ್ರ ಆರ್.ವಿ.ಯುವರಾಜ್ ಹಾಗೂ ಸಾಮಾಜಿಕ ಕಾರ್ಯಕರ್ತ ಆಲಂ ಪಾಶಾ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ಕೆಜಿಎಫ್ ಬಾಬು ಹಾಗೂ ಅವರ ಬೆಂಬಲಿಗರು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ವಕ್ಫ್ ಮಂಡಳಿಗೆ ಸೇರಿದ ಬಡಾ ಮಕಾನ್ ದರ್ಗಾದ 33 ಸಾವಿರ ಚದರಡಿ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಆರೋಪದಡಿ ಕೆಜಿಎಫ್ ಬಾಬು ವಿರುದ್ಧ ಸಾಮಾಜಿಕ ಕಾರ್ಯಕರ್ತ ಆಲಂ ಪಾಶಾ ನೀಡಿರುವ ದೂರಿನನ್ವಯ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರತಿಯಾಗಿ ಕೆಜಿಎಫ್ ಬಾಬು ಮತ್ತವರ ಬೆಂಬಲಿಗರು ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಜನ ಸಾಮಾನ್ಯರಿಗೆ ಸಹಾಯ ಮಾಡುವುದಾಗಿ ಕೆಜಿಎಫ್ ಬಾಬು ಕೆ.ಎಚ್. ರಸ್ತೆಯ ಬಳಿಯಿರುವ ವಕ್ಫ್ ಮಂಡಳಿಗೆ ಸೇರಿದ ಬಡಾ ಮಕಾನ್ ದರ್ಗಾದ 33 ಸಾವಿರ ಚದರಡಿ ಭೂಮಿಯನ್ನು ಬೆದರಿಸಿ ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಮತ್ತು ದಿ ಹೆಲ್ಪಿಂಗ್ ಸಿಟಿಜನ್ ಆ್ಯಂಡ್ ಪೀಪಲ್ಸ್ ಕೋರ್ಟ್ ಸಂಘಟನೆಯ ಅಧ್ಯಕ್ಷ ಆಲಂ ಪಾಶಾ ಆರೋಪಿಸಿದ್ದು ಈ ಬಗ್ಗೆ ವಿಲ್ಸನ್ ಗಾರ್ಡನ್ ಠಾಣೆಗೆ ದೂರು ನೀಡಿದ್ದರು. ಕೆಜಿಎಫ್ ಬಾಬುರಿಗೆ ನೆರವಾಗಿರುವ ಆರೋಪದಡಿ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನ ಶಾಫಿ ಸೌದಿ ಅವರ ವಿರುದ್ಧವೂ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ಕೆಜಿಎಫ್ ಬಾಬು ಪ್ರತಿಕ್ರಿಯಿಸಿ, ಆರ್.ವಿ.ದೇವರಾಜ್, ಅವರ ಪುತ್ರ ಆರ್.ವಿ.ಯುವರಾಜ್ ಹಾಗೂ ಆಲಂ ಪಾಶಾ ಮೂರು ಜನ ಸೇರಿಕೊಂಡು ಮನೆಗಳನ್ನು ಕಟ್ಟದಂತೆ ಒತ್ತಡ ಹೇರುತ್ತಿದ್ದಾರೆ. ಆದ ಕಾರಣ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿ ಪ್ರಕರಣವನ್ನು ದಾಖಲಿಸಿದ್ದಾರೆ. ಈ ಹಿನ್ನೆಲೆ ಈ ಮೂವರ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಕೆಜಿಎಫ್ ಬಾಬು ವಿರುದ್ಧ ಪೊಲೀಸ್ ಠಾಣಾ ಮೆಟ್ಟಿಲೇರಿದ ಯುವರಾಜ್