ಗೋವಾ ವಿಮೋಚನಾ ಹೋರಾಟಗಾರ ನದಿಗೆ ಹಾರಿರುವ ಶಂಕೆ: ಶವ ಪತ್ತೆಗೆ ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ
🎬 Watch Now: Feature Video
ಮುದ್ದೇಬಿಹಾಳ (ವಿಜಯಪುರ): ತಾಳಿಕೋಟಿ ತಾಲೂಕಿನ ದೇವರ ಹುಲಗಬಾಳದ ಗೋವಾ ವಿಮೋಚನಾ ಹೋರಾಟಗಾರ ಹಣಮಪ್ಪ ಮುದಕಪ್ಪ ಚಲವಾದಿ (90) ಕೃಷ್ಣಾ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದ್ದು, ಅವರ ಮೃತದೇಹ ಪತ್ತೆಗೆ ಮಂಗಳವಾರ ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಕಳೆದ ಎರಡು ದಿನಗಳ ಹಿಂದೆ ಮನೆಯಿಂದ ಹೊರ ಹೋಗಿರುವ ಹಣಮಪ್ಪ ಅವರು ತಂಗಡಗಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಬಳಿ ಓಡಾಡಿದ್ದಾರೆ ಎನ್ನಲಾಗಿದೆ. ಸೇತುವೆ ಮೇಲೆ ಅವರಿಗೆ ಸೇರಿರುವ ಮೊಬೈಲ್ ಫೋನ್, ಪಿಂಚಣಿ ಪಡೆಯುತ್ತಿದ್ದ ಪುಸ್ತಕ, ಚಪ್ಪಲಿ ದೊರೆತಿವೆ. ಇದರ ಆಧಾರದ ಮೇಲೆಯೇ ಹಣಮಪ್ಪ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.
ಈ ಕುರಿತು ಮಾತನಾಡಿರುವ ಅವರ ಪುತ್ರಿ ನೀಲಮ್ಮ ಚಲವಾದಿ, ನಮ್ಮ ತಂದೆ ಬಳಸುತ್ತಿದ್ದ ಮೊಬೈಲ್ ಫೋನ್, ಧರಿಸುತ್ತಿದ್ದ ಚಪ್ಪಲಿ ಸೇತುವೆ ಮೇಲೆ ಸಿಕ್ಕಿರುವುದನ್ನು ನೋಡಿದರೆ ಭಯವಾಗುತ್ತಿದೆ. ಮನೆಯ ಅಕ್ಕಪಕ್ಕದವರು ನೀಡಿದ ಕಿರಿಕಿರಿಯಿಂದ ಮನೆ ಬಿಟ್ಟು ಬಂದಿದ್ದರು. ಈಗ ಕಾಣುತ್ತಿಲ್ಲ. ನದಿಗೆ ಬಿದ್ದಿದ್ದಾರೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ಈ ವಸ್ತುಗಳು ಇಲ್ಲಿ ಸಿಕ್ಕಿರುವುದನ್ನು ನೋಡಿದರೆ ನದಿಗೆ ಹಾರಿರುವ ಅನುಮಾನ ಕಾಡುತ್ತಿದೆ. ಅವರನ್ನು ಹುಡುಕಿಕೊಡುವಂತೆ ತಾಲೂಕು ಆಡಳಿತವನ್ನು ಕೋರುತ್ತೇನೆ ಎಂದರು.
ಹಣಮಪ್ಪ ಅವರಿಗೆ ಗೋವಾ ವಿಮೋಚನಾ ಹೋರಾಟಗಾರರ ಹೆಸರಿನಲ್ಲಿ ಪ್ರತಿ ತಿಂಗಳು ನಾಲ್ಕು ಸಾವಿರ ರೂ.ಪಿಂಚಣಿ ಬರುತ್ತಿತ್ತು ಎಂದು ಮೂಲಗಳು ತಿಳಿಸಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳೀಯ ಈಜುಗಾರರ ಸಹಕಾರದಿಂದ ಹಿರಿಯ ಹೋರಾಟಗಾರರ ಶವ ಶೋಧಕ್ಕೆ ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಭೀಮಾ ನದಿಯಲ್ಲಿ ಇಬ್ಬರು ಮಹಿಳೆಯರು, ಇಬ್ಬರು ಪುರುಷರ ಶವಗಳು ಪತ್ತೆ