ಮಂಡ್ಯ: ನಾನು ಬಡತನ ರೇಖೆಗಿಂತ ಕೆಳಗಿಲ್ಲ. ಹೀಗಾಗಿ ಅನ್ನಭಾಗ್ಯ ನನಗೆ ಸಿಗಬಾರದು. ನನ್ನಂಥವರಿಗೆ ಅನ್ನಭಾಗ್ಯ ಸಿಗಬಾರದು ಎನ್ನುವ ಉದ್ದೇಶಕ್ಕಷ್ಟೇ ಅನರ್ಹರ ಬಿಪಿಎಲ್ ಕಾರ್ಡ್ ಎಪಿಎಲ್ಗೆ ಬದಲಾಯಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕೆ.ಆರ್.ಪೇಟೆಯ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೆಂಪೇಗೌಡ ರೈತ ಸಹಕಾರ ಭವನ, ಬ್ಯಾಂಕಿಂಗ್ ಶಾಖೆ, ಗೊಬ್ಬರ ಶಾಖೆಯ ಕಟ್ಟಡಗಳನ್ನು ಉದ್ಘಾಟಿಸಿ ಹಲವು ಫಲಾನುಭವಿಗಳಿಗೆ ಸಾಲದ ಚೆಕ್ ವಿತರಿಸಿ ಅವರು ಮಾತನಾಡಿದರು.
GDPಯಲ್ಲಿ ಇಡೀ ದೇಶದಲ್ಲಿ ನಾವೇ ನಂಬರ್ ಒನ್. ಇದಕ್ಕೆ ಸಹಕಾರ ಕ್ಷೇತ್ರದ ಕೊಡುಗೆ ಅಪಾರ. ರೈತರ ಶ್ರಮಕ್ಕೆ ತಕ್ಕ ಫಲ ಸಿಗಬೇಕು. ನಮ್ಮ ಉತ್ಪಾದನೆಗೆ ನಾವೇ ಬೆಲೆ ನಿಗಧಿ ಮಾಡುವಂತಾಗಬೇಕು ಎಂದರು.
ಕೈಗಾರಿಕೋದ್ಯಮಿಗಳು ಅವರು ತಯಾರಿಸಿದ ವಸ್ತುಗೆ ಅವರೇ ಬೆಲೆ ನಿಗದಿ ಮಾಡ್ತಾರೆ. ಇದೇ ಅಧಿಕಾರ ನಮ್ಮ ರೈತರಿಗೂ ಸಿಗಬೇಕು. ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ಒಕ್ಕೂಟ ವ್ಯವಸ್ಥೆ ಯಶಸ್ವಿ ಆಗಬೇಕಾದರೆ ದೇಶದ 140 ಕೋಟಿ ಜನರಿಗೂ ಸಕಲ ಸಹಕಾರ ಕೊಡಬೇಕು. ನಮ್ಮ ರೈತ ಸಮುದಾಯಕ್ಕೆ ಬೆಲೆ ಫಿಕ್ಸ್ ಮಾಡುವ ಅಧಿಕಾರ ಬರಬೇಕು. ಆಗ ತಾರತಮ್ಯ ನಿವಾರಣೆ ಆಗುತ್ತದೆ ಎಂದರು.
ಈ ದೇಶಕ್ಕೆ ಸಿಕ್ಕ ರಾಜಕೀಯ ಸ್ವಾತಂತ್ರ್ಯ ಯಶಸ್ವಿ ಆಗಬೇಕಾದರೆ, ಪ್ರತಿಯೊಬ್ಬರಿಗೂ ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯ ಸಿಗಬೇಕು ಎನ್ನುವ ಅಂಬೇಡ್ಕರ್ ಅವರ ಮಾತನ್ನು ಉಲ್ಲೇಖಿಸಿ ಈ ಕಾರಣಕ್ಕೇ ನಾವು ಅನ್ನ ಭಾಗ್ಯ ಮತ್ತು ಆರ್ಥಿಕ ಶಕ್ತಿ ಕೊಡುವ ಐದೈದು ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ಬಡ ಕುಟುಂಬದವರ ಮತ್ತು ನಮ್ಮ ಹೆಣ್ಣು ಮಕ್ಕಳ ಹಣ ಉಳಿತಾಯ ಆಗಲಿ ಎನ್ನುವ ಕಾರಣದಿಂದ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ ಯೋಜನೆಗಳನ್ನು ನಮ್ಮ ಜನರ ಮನೆ ಬಾಗಿಲಿಗೆ ತಲುಪಿಸಿದ್ದೇವೆ. ಕೈಯಲ್ಲಿ ಕಾಸಿದ್ದರೆ ತಾನೆ ನಮ್ಮ ಜನ ಖರೀದಿಗೆ ಹೋಗೋದು. ಅದಕ್ಕೇ ಜನರ ಕೈಯಲ್ಲಿ ಕಾಸು ಇರುವ ಯೋಜನೆ ಜಾರಿ ಮಾಡಿದ್ದೇವೆ ಎಂದರು.
5 ರೂಪಾಯಿ ಸಹಾಯಧನ: ರಾಜ್ಯದಲ್ಲಿ ಪ್ರತೀ ಲೀಟರ್ ಹಾಲಿಗೆ 5 ರೂಪಾಯಿ ಸಹಾಯ ಧನ ಜಾರಿ ಮಾಡಿದ್ದು ನಾವು. ದಿನಕ್ಕೆ ರಾಜ್ಯದಲ್ಲಿ ಒಂದು ಕೋಟಿ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ಅಂದರೆ ಪ್ರತೀ ದಿನ 5 ಕೋಟಿ ರೂಪಾಯಿಯನ್ನು ಹಾಲು ಉತ್ಪಾದಕರಿಗೆ ಕೊಡುತ್ತಿದ್ದೇವೆ ಎಂದು ಲೆಕ್ಕ ವಿವರಿಸಿದರು.
ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ಒಂದು ಸಹಕಾರಿ ಸಂಸ್ಥೆ 50 ವರ್ಷದ ಸೇವೆಯೇ ದೊಡ್ಡ ಸಾಧನೆ. 50 ವರ್ಷದ ಹಿಂದೆ ಸ್ಥಾಪಿತವಾದ ಸಹಕಾರ ಸಂಸ್ಥೆ ಸ್ವಂತ ಹಣದಲ್ಲಿ ನಿವೇಶನ ಖರೀದಿಸಿದೆ. ಸಹಕಾರಿ ತತ್ವ ನಾನು ಎಲ್ಲರಿಗಾಗಿ, ಎಲ್ಲರಿಗಾಗಿ ನಾನು ಅನ್ನೋದು. ರೈತರ ಬದುಕು ಹಸನಾಗಿಸುವುದು ಸಹಕಾರಿ ಕ್ಷೇತ್ರದ ಉದ್ದೇಶ. ಹೈನುಗಾರಿಕೆ ಉತ್ತೇಜನದ ಸಲುವಾಗಿ ಪ್ರೋತ್ಸಾಹ ಸೇರಿ 5 ಲಕ್ಷದವರೆಗೆ ಶೂನ್ಯ ಬಡ್ಡಿ ದರದವರೆಗೆ ಸಾಲ ಕೊಡ್ತಿರೋದು ಸಿದ್ದರಾಮಯ್ಯ ಅವರು. ಮಧ್ಯಮ ಅವಧಿ ಸಾಲದಲ್ಲೂ ಏರಿಕೆ ಮಾಡಿದ್ದು ಅವರೇ ಎಂದರು.
ವೇದಿಕೆಯಲ್ಲಿ ಸಿಎಂಗೆ ಹಲವು ಬೇಡಿಕೆಯಿಟ್ಟ ಕೆ.ಆರ್.ಪೇಟೆ ಶಾಸಕ, ಕೆ.ಆರ್.ಪೇಟೆ ತಾಲೂಕಿನ ರಸ್ತೆಗಳು ಮಂಡಿ ಉದ್ದ ಗುಂಡಿಗಳು ಬಿದ್ದಿವೆ. ನಮ್ಮ ತಾಲೂಕಿನಲ್ಲಿ ಹಲವು ಕೆರೆಗಳು ಏರಿ ಹೊಡೆದಿದೆ. ಈ ಕುರಿತು ವಿಧಾನಸಭೆ ಅಧಿವೇಶನದಲ್ಲಿಯೂ ಮಾತನಾಡಿದ್ದೇನೆ. ಆ ಸಂದರ್ಭದಲ್ಲಿಯೂ ಸಮಸ್ಯೆಗೆ ಸ್ಪಂದಿಸುವ ಭರವಸೆ ಕೊಟ್ಟಿದ್ರು. ಈ ಕುರಿತು ಸಚಿವ ಚಲುವರಾಯಸ್ವಾಮಿಯವರಿಗೂ ಮನವಿ ಮಾಡಿದ್ದೆ. ನನಗೆ ಇಡೀ ಜಿಲ್ಲೆ ಹಾಗೂ ಸಮಾಜದ ಅಭಿವೃದ್ದಿ ನನ್ನ ಗುರಿ ಎಂದಿದ್ರು. ನಾನು ಜೆಡಿಎಸ್ ಶಾಸಕನಾಗಿದ್ದೇನೆ. ನಮ್ಮ ಕ್ಷೇತ್ರದ ಸಮಸ್ಯೆಗೂ ಸ್ಪಂದಿಸಿ. ನಮ್ಮ ತಾಲೂಕಿಗೆ ವಿಶೇಷ ಅನುದಾನ ಇರಲಿ. ಮೂಲಭೂತ ಸೌಕರ್ಯಕ್ಕಾದರೂ ಅನುದಾನ ನೀಡುವಂತೆ ಒತ್ತಾಯಿಸಿದರು.
ಇದನ್ನೂ ಓದಿ: ಇಡಿ ಲೋಕಾಯುಕ್ತಕ್ಕೆ ಪತ್ರ ಬರೆದಿರೋದು ರಾಜಕೀಯ ಪ್ರೇರಿತ: ಸಿಎಂ ಸಿದ್ದರಾಮಯ್ಯ