ಸಚಿವ ಆರಗ ಜ್ಞಾನೇಂದ್ರಗೆ ಸದ್ಬುದ್ಧಿ ನೀಡುವಂತೆ ಬಂದಲೆ ಗುಳಿಗ ಕ್ಷೇತ್ರದಲ್ಲಿ ಪ್ರಾರ್ಥನೆ
🎬 Watch Now: Feature Video
ಮಂಗಳೂರು: ಗೃಹ ಸಚಿವ ಆರಗ ಜ್ಞಾನೇಂದ್ರ ಗುಳಿಗ ದೈವದ ಬಗ್ಗೆ ಮಾತನಾಡಿರುವುದನ್ನು ಖಂಡಿಸಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅಭಿಮಾನಿ ಬಳಗ ನಗರದ ಪಚ್ಚನಾಡಿ ಬಂದಲೆಯ ಶ್ರೀಮಂತ ರಾಜಗುಳಿಗ ಕ್ಷೇತ್ರಕ್ಕೆ ಆಗಮಿಸಿ ದೈವದ ಮುಂದೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಕಿಮ್ಮನೆ ರತ್ನಾಕರ್ ಅಭಿಮಾನಿ ಬಳಗದ 50ಕ್ಕೂ ಅಧಿಕ ಮಂದಿ ತೀರ್ಥಹಳ್ಳಿಯಿಂದ ಶನಿವಾರ ಮಂಗಳೂರಿನ ಬಂದಲೆ ಗುಳಿಗ ಕ್ಷೇತ್ರಕ್ಕೆ ವಾಹನ ಜಾಥಾದಲ್ಲಿ ಆಗಮಿಸಿದರು. ಈ ವೇಳೆ ಕ್ಷೇತ್ರದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಗುಳಿಗ ದೈವದ ಬಗ್ಗೆ ಮಾತನಾಡಿರುವ ಆರಗ ಜ್ಞಾನೇಂದ್ರರಿಗೆ ಸದ್ಬುದ್ಧಿ ನೀಡಬೇಕು. ಅವರು ತುಳುನಾಡಿನ ಯಾವುದಾದರೊಂದು ಗುಳಿಗ ಕ್ಷೇತ್ರಕ್ಕೆ ಆಗಮಿಸಿ ಕ್ಷಮೆಯಾಚನೆ ಮಾಡುವಂತೆ ಆಗಬೇಕು. ಹಾಗೆ ಮಾಡಿದ್ದಲ್ಲಿ ತೀರ್ಥಹಳ್ಳಿಯಲ್ಲಿ ಮತ್ತೆ ನಾವು ಅದ್ದೂರಿಯಾಗಿ ‘ಶಿವದೂತೆ ಗುಳಿಗೆ’ ನಾಟಕವನ್ನು ಆಯೋಜಿಸುತ್ತೇವೆ ಎಂದು ಹರಕೆಯನ್ನು ಹೊತ್ತುಕೊಂಡಿದ್ದಾರೆ.
ಕಿಮ್ಮನೆ ರತ್ನಾಕರ್ ಅಭಿಮಾನಿ ಬಳಗದವರು ಇತ್ತೀಚೆಗೆ ತೀರ್ಥಹಳ್ಳಿಯಲ್ಲಿ ಮತ್ತು ಕರಾವಳಿಯಲ್ಲಿ ಜನಮೆಚ್ಚುಗೆ ಪಡೆದು 400ಕ್ಕೂ ಮಿಕ್ಕಿ ಪ್ರದರ್ಶನ ಕಂಡಿರುವ ‘ಶಿವದೂತ ಗುಳಿಗೆ’ ನಾಟಕವನ್ನು ಆಯೋಜಿಸಿದ್ದರು. ನಾಟಕದ ಪ್ರಚಾರಕ್ಕಾಗಿ ಅಲ್ಲಲ್ಲಿ ನಾಟಕದ ಬ್ಯಾನರ್ ಅಳವಡಿಸಲಾಗಿತ್ತು. ಈ ಬ್ಯಾನರ್ ಉದ್ದೇಶಿಸಿ ಗೃಹಸಚಿವ ಆರಗ ಜ್ಞಾನೇಂದ್ರ ಟೀಕಿಸಿ ಮಾತನಾಡಿದ್ದರು. ಈ ಹೇಳಿಕೆ ಸಾಕಷ್ಟು ವಿರೋಧಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಕಿಮ್ಮನೆ ರತ್ನಾಕರ್ ಅಭಿಮಾನಿ ಬಳಗದವರು ಇಂದು ತೀರ್ಥಹಳ್ಳಿಯಿಂದ ಮಂಗಳೂರಿಗೆ ಆಗಮಿಸಿ ಗುಳಿಗ ದೈವದ ಮುಂದೆ ಪ್ರಾರ್ಥನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಆಹಾರ ಅರಸಿ ಬಂದಿದ್ದ ಗಂಡಾನೆ ವಿದ್ಯುತ್ ತಂತಿಗೆ ಸಿಲುಕಿ ಸಾವು: ವಿಡಿಯೋ