ಪಕ್ಷ ಎಲ್ಲಿ ಹೇಳುತ್ತದೋ ಅಲ್ಲಿಯೇ ನನ್ನ ಸ್ಪರ್ಧೆ: ಬಿ.ವೈ.ವಿಜಯೇಂದ್ರ - ಕರ್ನಾಟಕ ಚುನಾವಣೆ 2023
🎬 Watch Now: Feature Video
ಕುಷ್ಟಗಿ: "ಪಕ್ಷ ಎಲ್ಲಿ ಸ್ಪರ್ಧೆ ಮಾಡು ಎಂದು ಹೇಳುತ್ತದೋ ಅಲ್ಲಿ ನನ್ನ ಸ್ಪರ್ಧೆ. ಬೇಡ ಎಂದಲ್ಲಿ ಸ್ಪರ್ಧಿಸಲ್ಲ" ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ತಾಲೂಕಿನ ಹನುಮ ಸಾಗರದಲ್ಲಿ ಎಸ್ಟಿ ಮೋರ್ಚಾ ಸಮಾವೇಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಮುಂದಿನ ಚುನಾವಣೆಯಲ್ಲಿ ಪ್ರತಿನಿಧಿಸುವ ಕ್ಷೇತ್ರದ ವಿಚಾರ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದರು.
ಯಡಿಯೂರಪ್ಪ ಕುಟುಂಬಕ್ಕೆ ಹಿತಶತ್ರುಗಳ ಸಂಖ್ಯೆ ಜಾಸ್ತಿಯಾಗುತ್ತಿದೆಯಾ? ಎಂಬ ಸುದ್ದಿಗಾರರ ಪ್ರಶ್ನೆಗೆ, "ಸಚಿವ ಸೋಮಣ್ಣ ಅವರ ಪುತ್ರ ಅರುಣ ಸೋಮಣ್ಣ ಹೇಳಿಕೆಯನ್ನು ನಾನು ಗಮನಿಸಿಲ್ಲ. ರಾಜಕಾರಣದಲ್ಲಿ ಶತ್ರುಗಳು ಇದ್ದಷ್ಟು ನಾವುಗಳು ಬೆಳೆಸಲು ಸಾಧ್ಯ. ಹಿತಶತ್ರುಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ರಾಜ್ಯ ಬಿಜೆಪಿ ಉಪಾಧ್ಯಕ್ಷನಾಗಿ ವಿವಿಧ ಮೋರ್ಚಾ ಸಮಾವೇಶದ ಸಂಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ" ಎಂದರು.
ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಸಿ.ಟಿ.ರವಿ ಅವರು ತಮ್ಮ ಟಿಕೆಟ್ ವಿಚಾರ ಪ್ರಸ್ತಾಪಿಸಿರುವ ಬಗ್ಗೆ ಪ್ರತಿಕ್ರಿಯಿಸಿ, "ಪಕ್ಷದಲ್ಲಿ ಹಿರಿಯರಿದ್ಧಾರೆ. ಯಡಿಯೂರಪ್ಪ ಎಷ್ಟು ಹಿರಿಯರು ಎಂಬುದು ಅವರಿಗೂ ಗೊತ್ತಿದೆ. ಅವರು ಪಕ್ಷ ಸಂಘಟನೆಯಲ್ಲಿ ಎಷ್ಟು ಕೆಲಸ ಮಾಡಿದ್ದಾರೆಂದು ಗೊತ್ತಿದೆ. ಪಕ್ಷದ ಟಿಕೆಟ್ ಯಡಿಯೂರಪ್ಪ ಕಿಚನ್ನಲ್ಲೂ ಮಾಡಲ್ಲ, ಇನ್ನೊಬ್ಬರ ಕಿಚನ್ನಲ್ಲೂ ಮಾಡಲ್ಲ. ನಾನು ಈ ಟಿಕೆಟ್ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಪಕ್ಷ ಏನೇ ನಿರ್ಧಾರ ಮಾಡಿದರೂ ಅದಕ್ಕೆ ಬದ್ದ. ಮುಂಬರುವ ದಿನಗಳಲ್ಲಿ ಹಿರಿಯರು ಟಿಕೆಟ್ ಬಗ್ಗೆ ನಿರ್ಧರಿಸಲಿದ್ದಾರೆ. ಇಂತಹ ಹೇಳಿಕೆಗಳಿಗೆ ನಾನು ಉತ್ತರ ಕೊಡುವುದಿಲ್ಲ" ಎಂದರು.
ಚುನಾವಣೆಯಲ್ಲಿ 130 ರಿಂದ 140 ಸ್ಥಾನ ಗೆಲ್ಲುವ ಮೂಲಕ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಇದಕ್ಕಾಗಿ ರಾಜ್ಯಾದ್ಯಂತ ವಿವಿಧ ಮೋರ್ಚಾ ಸಮಾವೇಶಗಳು ನಡೆಯುತ್ತಿದೆ. ಯುವಕರು ಹೆಚ್ಚಾಗಿ ಪಾಲ್ಗೊಳ್ಳುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯದ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಪಕ್ಷದ ಹಿರಿಯರು, ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡಲಾಗುತ್ತಿದೆ. ಹೀಗಾಗಿ ರಾಜ್ಯಾದ್ಯಂತ ಪ್ರವಾಸ ಮಾಡಲಾಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: ನಾನು ಎಲ್ಲಿಗೂ ಹೋಗುವುದಿಲ್ಲ, ಬಿಜೆಪಿಯಲ್ಲೇ ಇರುತ್ತೇನೆ : ಸಚಿವ ವಿ ಸೋಮಣ್ಣ ಸ್ಪಷ್ಟನೆ