1,250 ಸಹಾಯಕ ಪ್ರಾಧ್ಯಾಪಕರ ನೇಮಕ ಪ್ರಕ್ರಿಯೆ ಶೀಘ್ರ: ಸಚಿವ ಡಾ.ಅಶ್ವತ್ಥನಾರಾಯಣ - assistant professors recruitment
🎬 Watch Now: Feature Video
ಬೆಂಗಳೂರು: ಸರ್ಕಾರಿ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ 1,250 ಸಹಾಯಕ ಪ್ರಾಧ್ಯಾಪಕರ ಆಯ್ಕೆಗೆ ಲಿಖಿತ ಪರೀಕ್ಷೆ ಮುಗಿದಿದ್ದು, ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆ ನಡೆಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ವಿಧಾನಸಭೆಯಲ್ಲಿ ಇಂದು ತಿಳಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಡಾ.ಅವಿನಾಶ್ ಉಮೇಶ್ ಜಾಧವ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಒಟ್ಟು 6,500 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳು ಮಂಜೂರಾಗಿವೆ. ಇದರಲ್ಲಿ 5 ಸಾವಿರ ಹುದ್ದೆಗಳು ಭರ್ತಿಯಾಗಿವೆ. ಹೊಸದಾಗಿ, 1,250 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಭರ್ತಿ ಮಾಡಲು ಲಿಖಿತ ಪರೀಕ್ಷೆ ನಡೆಸಲಾಗಿದೆ. ಬಾಕಿ ಉಳಿದಿರುವ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು. ಯಾವ ಕಾಲದಲ್ಲಿ ಬೋಧಕರ ಕೊರತೆ ಇದೆಯೋ ಅಂತಹ ಕಡೆ ಆದ್ಯತೆಯ ಮೇರೆಗೆ ಭರ್ತಿ ಮಾಡುವುದಾಗಿ ಭರವಸೆ ನೀಡಿದರು.
ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹುದ್ದೆಗಳನ್ನು ಭರ್ತಿ ಮಾಡಲು ನಮಗೆ ಹೆಚ್ಚುವರಿಯಾಗಿ 8 ಸಾವಿರ ಹುದ್ದೆಗಳು ಬೇಕಾಗುತ್ತದೆ. ಅತಿಥಿ ಉಪನ್ಯಾಸಕರ ಮೂಲಕವೂ ಕೊರತೆ ಇರುವ ಕಡೆ ಪಾಠ ಪ್ರವಚನಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಎಲ್ಲೆಲ್ಲಿ ಹುದ್ದೆಗಳು ಖಾಲಿ ಇವೆಯೋ ಅಂತಹ ಕಡೆ ಭರ್ತಿ ಮಾಡಬೇಕು. ಕೆಲವು ಕಾಲೇಜುಗಳಲ್ಲಿ 80-90ರಷ್ಟು ವಿದ್ಯಾರ್ಥಿಗಳಿಗೆ ಒಬ್ಬರೇ ಪ್ರಾಧ್ಯಾಪಕರಿದ್ದಾರೆ. ಇಂತಹ ಕಡೆ ಗಮನ ನೀಡಬೇಕು ಎಂದು ಸಚಿವರಿಗೆ ಸಲಹೆ ನೀಡಿದರು.
ಇದನ್ನೂ ಓದಿ: ಸಿದ್ದರಾಮಯ್ಯ ಕುರಿತು ವಿವಾದಿತ ಹೇಳಿಕೆ: ಸದನದಲ್ಲಿ ವಿಷಾದ ವ್ಯಕ್ತಪಡಿಸಿದ ಸಚಿವ ಅಶ್ವತ್ಥನಾರಾಯಣ