ಯಾದಗಿರಿಯಲ್ಲಿ ಭರ್ಜರಿ ರೋಡ್ ಶೋ ನಡೆಸಿದ ಅಮಿತ್ ಶಾ.. - ಕೇಂದ್ರ ಗೃಹ ಸಚಿವ ಅಮಿತ್ ಶಾ
🎬 Watch Now: Feature Video
ಯಾದಗಿರಿ:ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಮಹಾಪ್ರಚಾರ ಅಭಿಯಾನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಯಾದಗಿರಿ ನಗರಕ್ಕೆ ಆಗಮಿಸಿ ಬೃಹತ್ ರೋಡ್ ಶೋ ನಡೆಸಿ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಮಾಡಿದರು. ಹೆಲಿಕ್ಯಾಪ್ಟರ್ ಮೂಲಕ ಆಗಮಿಸಿದ ಶಾ, ಹೆಲಿಪ್ಯಾಡ್ನಿಂದ ನೇರವಾಗಿ ಡಿಗ್ರಿ ಕಾಲೇಜಿನ ಹತ್ತಿರ ಆಗಮಿಸಿದರು. ಅಲ್ಲಿಂದ ತೆರೆದ ವಾಹನದಲ್ಲಿ ಸಹಸ್ರಾರು ಕಾರ್ಯಕರ್ತರೊಂದಿಗೆ ಸುಭಾಶ್ಚಂದ್ರ ಬೋಸ್ ವೃತ್ತದ ಮಾರ್ಗವಾಗಿ ಶಾಸ್ತ್ರೀ ವೃತ್ತದಿಂದ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರ ಕಚೇರಿವರೆಗೂ ರೋಡ್ ಶೋ ನಡೆಸಿದರು.
ನಂತರ ಮಹಾಪ್ರಚಾರ ಅಭಿಯಾನ ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದ ಅಭಿವೃದ್ದಿ, ರಕ್ಷಣೆ ಹಾಗೂ ಸಾಮಾಜಿಕ ಬದ್ಧತೆ ಕಾಂಗ್ರೆಸ್ ಪಕ್ಷದಿಂದ ಅಸಾಧ್ಯ. ಅದು ಬಿಜೆಪಿಯಿಂದ ಮಾತ್ರ ಸಾಧ್ಯ. ಕಾಂಗ್ರೆಸ್ ಪಕ್ಷ ಮುಸ್ಲಿಮರಿಗೆ 4% ಮೀಸಲಾತಿ ನೀಡಿತ್ತು. ನಾವು ಅದನ್ನು ರದ್ದುಗೊಳಿಸಿ ಲಿಂಗಾಯತ, ಒಕ್ಕಲಿಗ, ಎಸ್ಸಿ ಹಾಗೂ ಎಸ್ಟಿಗೆ ನೀಡಿದ್ದೇವೆ. ಪಿಎಫ್ಐನ್ನು ಬ್ಯಾನ್ ಮಾಡಿ ಕರ್ನಾಟಕವನ್ನು ಸುರಕ್ಷಿತಗೊಳಿಸಿದ್ದೇವೆ ಎಂದರು.
ಪ್ರಧಾನಿ ನರೇಂದ್ರ ಮೋದಿ, ಯಡಿಯೂರಪ್ಪ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಕರ್ನಾಟಕವನ್ನು ಅಭಿವೃದ್ದಿಗೊಳಿಸಿದ್ದಾರೆ. ಹೀಗಾಗಿ, ನಾವು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಮೋದಿ ಅವರ ನೇತೃತ್ವದಲ್ಲಿ ಹಾಗೂ ಡಬಲ್ ಇಂಜಿನ್ ಸರ್ಕಾರದಲ್ಲಿ ಅಭಿವೃದ್ದಿ ಮಾಡೋಣ. ಅದಕ್ಕೆ ನೀವೆಲ್ಲ ಕಮಲದ ಚಿಹ್ನೆಗೆ ಮತ ಹಾಕುವ ಮೂಲಕ ಸಂಪೂರ್ಣ ಬಹುಮತದ ಬಿಜೆಪಿ ಸರ್ಕಾರವನ್ನು ಕರ್ನಾಟಕದಲ್ಲಿ ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿದರು.
ಈ ವೇಳೆ ಯಾದಗಿರಿ ಬಿಜೆಪಿ ಅಭ್ಯರ್ಥಿ ವೆಂಕಟರೆಡ್ಡಿ ಮುದ್ನಾಳ, ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ, ಬಿಜೆಪಿ ಜಿಲ್ಲಾಧ್ಯಕ್ಷ ಡಾ ಶರಣಭೂಪಾಲರಡ್ಡಿ ನಾಯ್ಕಲ್, ವೀರಬಸವಂತರಡ್ಡಿ ಮುದ್ನಾಳ, ವಿಂದ್ರನಾಥ ನಾದ, ನಗರ ಸಭೆ ಅಧ್ಯಕ್ಷ ಸುರೇಶ್ ಅಂಬಿಗೇರ ಸೇರಿದಂತೆ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.
ಇದನ್ನೂ ಓದಿ:ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸ್ಲಿಂ ತುಷ್ಟಿಕರಣ: ಅಮಿತ್ ಶಾ ಎಚ್ಚರಿಕೆ