ಗುರುಮಠಕಲ್: ಸರ್ಕಾರಗಳು ಜನಪರ ನಿಲುವುಗಳನ್ನು ಹಾಗೂ ಜನ ಹಿತ ಕಾಯುವ ಕೆಲಸವನ್ನು ಮಾಡಬೇಕು, ಅದನ್ನು ಕಡೆಗಣಿಸಿ ನಮ್ಮ ರಾಜ್ಯ ಸರ್ಕಾರ ಜನವಿರೋಧಿ ಕಾರ್ಯಗಳಿಗೆ ಕೈಹಾಕಿದೆ. ಜನವಿರೋಧಿ ನಿಲುವುಗಳನ್ನು ಕೈಬಿಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಕಾಂಗ್ರೆಸ್ ಬ್ಲಾಕ್ ಘಟಕದ ಅಧ್ಯಕ್ಷ ಮಹಿಪಾಲರೆಡ್ಡಿ ಹತ್ತಿಕುಣ ಎಚ್ಚರಿಸಿದರು.
ಪಟ್ಟಣದಲ್ಲಿ ಗುರುವಾರ ಕಾಂಗ್ರೆಸ್ ಕರೆ ನೀಡಿದ್ದ ಜನಧ್ವನಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೊರೊನಾ ಸಮಯದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಕುರಿತು ನ್ಯಾಯಾಂಗ ತನಿಖೆ ಆಗಬೇಕು. ರೈತ ವಿರೋಧಿಯಾಗಿರುವ ಕೃಷಿ ಉತ್ಪನ್ನ ಮಾರಾಟ ಸಮಿತಿ ತಿದ್ದುಪಡಿ ಕಾಯ್ದೆ ಹಾಗೂ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸಿ ಎಂದು ಅವರು ಆಗ್ರಹಿಸಿದರು.
ಸರ್ಕಾರದ ಕೈಗಾರಿಕೆಗಳ ವಿವಾದಗಳ ತಿದ್ದುಪಡಿಯಿಂದ ಕಾರ್ಮಿಕರಿಗೆ ತೊಂದರೆಯಾಗಲಿದ್ದು, ಬೀದಿಗೆ ಬೀಳುವಂತಿದೆ. ಇದು ಉದ್ಯಮಿಗಳ ಪರವಾಗಿರುವುದರಿಂದ ಭತ್ಯೆ, ಗುತ್ತಿಗೆ ಕಾರ್ಮಿಕರ ನೇಮಕ ಸೇರಿದಂತೆ ವಿವಿಧ ವಿಷಯಗಳಲ್ಲಿ ತಿದ್ದುಪಡಿಯಿಂದ ಕಾರ್ಮಿಕರಿಗೆ ಸಮಸ್ಯೆಗಳೆ ಹೆಚ್ಚಲಿದೆ. ತಿದ್ದುಪಡಿಯಲ್ಲಿ ಕಾರ್ಮಿಕರ ಹಿತದೃಷ್ಟಿಯನ್ನು ಪರಿಗಣಿಸದಿರುವುದು ಏಕೆ ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಪಟ್ಟಣದ ನಗರೇಶ್ವರ ದೇವಸ್ಥಾನದಿಂದ ಮೆರವಣಿಗೆಯ ಮೂಲಕ ಆಗಮಿಸಿದ ಪ್ರತಿಭಟನಾಕಾರರು ನಾಡ ಕಚೇರಿಯ ಎದುರು ಜಮಾವಣೆಗೊಂಡು ತಹಶೀಲ್ದಾರ್ ಸಂಗಮೇಶ ಜಿಡಗೆ ಮುಖಾಂತರ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.