ಗುರುಮಠಕಲ್: ತಾಲೂಕಿನ ಸೈದಾಪುರ ಪಟ್ಟಣದಲ್ಲಿ ಸ್ಥಾಪಿಸಲಾದ ಕ್ವಾರಂಟೈನ್ ಕೇಂದ್ರ ಅವ್ಯವಸ್ಥೆಯ ಆಗರವಾಗಿದೆ. ಆದರೆ ಸಂಬಂಧಿಸಿದ ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಆರೋಪಿಸಿ ಅಲ್ಲಿರುವವರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿ ಮುಂಬೈ, ಪುಣೆ, ನಾಸಿಕ್ ಹಾಗೂ ಸೊಲ್ಲಾಪುರದಿಂದ ಬಂದ ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಶೌಚಾಲಯಗಳ ಸಮಸ್ಯೆ, ಸರಿಯಾದ ಊಟ ನೀಡುತ್ತಿಲ್ಲ. ಮಾಸ್ಕ್, ಸ್ಯಾನಿಟೈಸರ್, ಸಾಬೂನು, ಟೂತ್ ಪೇಸ್ಟ್ ಮತ್ತಿತರ ಮೂಲ ಸೌಲಭ್ಯಗಳನ್ನು ಕ್ವಾರಂಟೈನ್ಗೆ ಬಂದ ನಾಲ್ಕು ದಿನಗಳ ನಂತರ ಕೊಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ನಮ್ಮ ಜಾಗೃತಿಯಿಂದ ನಾವು ಸುರಕ್ಷಿತವಾಗಿ ಬಂದರೂ ಸಹ ಕ್ವಾರಂಟೈನ್ ಕೇಂದ್ರದಲ್ಲಿ ಸೋಂಕು ಅಂಟಿಸಿಕೊಳ್ಳುವ ವಾತಾವರಣ ನಿರ್ಮಾಣವಾಗಿದೆ ಎಂದು ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.