ತುಮಕೂರು : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತ ಚರ್ಚೆಗಳು ನಡೆಯುತ್ತಿರುವುದಕ್ಕೆ ಪೂರಕವಾಗಿ ಇಂದು (ಭಾನುವಾರ) ಸಚಿವ ಸತೀಶ್ ಜಾರಕಿಹೊಳಿ ಹಾಗೂ ಗೃಹ ಸಚಿವ ಡಾ. ಜಿ ಪರಮೇಶ್ವರ್ ತುಮಕೂರಿನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಇದರಿಂದಾಗಿ ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.
ಗೃಹ ಸಚಿವ ಡಾ. ಜಿ ಪರಮೇಶ್ವರ್ ಒಡೆತನದ ತುಮಕೂರಿನ ಸಿದ್ದಾರ್ಥ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಚಿವರಿಬ್ಬರೂ ಭೇಟಿಯಾಗಿದ್ದರು. ಇತ್ತೀಚಿಗಷ್ಟೇ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನ ಸತೀಶ್ ಜಾರಕಿಹೊಳಿ ಭೇಟಿಯಾಗಿದ್ದರು. ಅದಕ್ಕೂ ಮುನ್ನ ಹಲವು ಬಾರಿ ಇಬ್ಬರು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.
ಇದೀಗ ದಿಢೀರ್ ಆಗಿ ಇಬ್ಬರು ಸಚಿವರು ಭೇಟಿ ಮಾಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ತುಮಕೂರಿನಲ್ಲಿಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಭೇಟಿ ಬಳಿಕ ಸಚಿವ ಸತೀಶ್ ಜಾರಕಿಹೊಳಿ ಮಾಧ್ಯಮದವರೊಂದಿಗೆ ಮಾತನಾಡಿದ್ದು, ದಲಿತ ಸಿಎಂ ಪ್ರಸ್ತಾವನೆ ಸದ್ಯಕ್ಕಿಲ್ಲ. ಇದ್ದಾಗ ನಾವೇ ಕರೆದು ಹೇಳ್ತಿವಿ. ಸದ್ಯಕ್ಕಂತೂ ನಮ್ಮ ಬೇಡಿಕೆ ಇಲ್ಲ ಎಂದಿದ್ದಾರೆ.
ಸಿಎಂ ಸ್ಥಾನ ಖಾಲಿಯೇ ಇಲ್ಲ. ಯಾರಿಗೆ ಮಾಡ್ತೀರಿ ನೀವು. ಇರೋದು ಒಂದೇ ಸ್ಥಾನ. ಆ ತರಹದ ಸನ್ನಿವೇಶ ಇಲ್ಲ.
ಭೇಟಿ ಆಗಿದ್ದೀವಿ. ಊಟ ಮಾಡಿಸಿದ್ರು ಅಷ್ಟೇ ಎಂದು ತಿಳಿಸಿದರು.
ನಂದು ಬೇರೆ ಕಾರ್ಯಕ್ರಮ ಇತ್ತು, ಹಾಗಾಗಿ ಅಲ್ಲಿ ಬಂದಿದ್ದೆ. ಸಾಹೇಬ್ರ ನೋಡ್ಕೊಂಡ್ ಹೋಗೋಕೆ ಬಂದಿದ್ದೆ ಅಷ್ಟೇ.
ಬೇರೆ ಏನು ಚರ್ಚೆ ಆಗುತ್ತೆ. ನಾವು ರಾಜೀನಾಮೆ ಕೊಡುವುದು ಬೇಡ ಅಂತಾ ಸಿಎಂ ಸಿದ್ದರಾಮಯ್ಯ ಅವರಿಗೆ ಹೇಳಿದ್ದೀವಲ್ಲ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.
ಅವರು ಕೂಗು ಶುರು ಮಾಡಿದ್ರೆ ಮಾಡಲಿ. ನಾವು ಬೇಡ ಅಂತಾ ಹೇಳಿದ್ದೀವಲ್ಲ. ದೆಹಲಿಯಲ್ಲಿ ಖರ್ಗೆ ಭೇಟಿ ಮಾಡಿರುವ ವಿಚಾರದಲ್ಲಿ ಅದು ಕೂಡ ಅಷ್ಟೇ. ಸಾಹೇಬ್ರನ್ನ ಭೇಟಿ ಮಾಡಿದ ಹಾಗೆ ಸೇಮ್. ಪಕ್ಷದ ಅಧ್ಯಕ್ಷರ ಬಳಿ ಹೋಗಿದ್ದೀವಿ, ಅದಕ್ಕೆ ಭೇಟಿಯಾಗಿದ್ದೀವಿ ಎಂದು ಹೇಳಿದರು.
ಸಚಿವರು- ಶಾಸಕರು ಅಂದ್ಮೇಲೆ ಭೇಟಿಯಾಗ್ತಲೇ ಇರ್ತೀವಿ: ಭೇಟಿಯಾಗ್ತಾನೆ ಇರ್ತೀವಿ. ಎಲ್ಲಾ ಒಂದೇ, ಸಚಿವರು ಶಾಸಕರು ಅಂದ್ಮೇಲೆ ಭೇಟಿಯಾಗ್ತಲೇ ಇರ್ತೀವಿ. ನೀವೆಲ್ಲಾ ಹೇಗೆ ಸೇರ್ತಾ ಇರ್ತೀರೋ ಹಾಗೆ ನಾವು ಕೂಡ ಸೇರ್ತಾ ಇರ್ತೀವಿ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಇದನ್ನೂ ಓದಿ : 'ಸಚಿವ ಮಹದೇವಪ್ಪ ಮನೆಯಲ್ಲಿ ಸಿಎಂ ಸ್ಥಾನದ ಕುರಿತು ಯಾವುದೇ ಚರ್ಚೆ ನಡೆದಿಲ್ಲ' - Minister Parameshwar