ಹೈದರಾಬಾದ್: ಟೀಂ ಇಂಡಿಯಾದ ಸಂಘಟಿತ ಆಟಕ್ಕೆ ಬಾಂಗ್ಲಾದೇಶ ಸುಲಭವಾಗಿ ಶರಣಾಯಿತು. ಈ ಮೂಲಕ ಮೂರು ಟಿ 20 ಪಂದ್ಯಗಳ ಸರಣಿಯಲ್ಲಿ ಭಾರತ ತಂಡ ಮುನ್ನಡೆ ಸಾಧಿಸಿದೆ.
ಗ್ವಾಲಿಯರ್ನ ಮಾಧವರಾವ್ ಸಿಂಧ್ಯಾ ಕ್ರಿಕೆಟ್ ಮೈದಾನದಲ್ಲಿ ಇಂದು ನಡೆದ ಸರಣಿಯ ಪಂದ್ಯದಲ್ಲಿ ಭಾರತ ತಂಡ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ಗೆ ಇಳಿದ ಬಾಂಗ್ಲಾ ತಂಡವನ್ನು ಭಾರತದ ಬೌಲರ್ಗಳು ಕೇವಲ 127 ರನ್ಗಳಿಗೆ ಕಟ್ಟಿ ಹಾಕಿದರು.
ಈ ಸಾಧಾರಣ ಗುರಿ ಬೆನ್ನತ್ತಿದ್ದ ಸೂರ್ಯಕುಮಾರ್ ಯಾದವ್ ಟೀಂ, 11.5 ಓವರ್ಗಳಲ್ಲಿ 3 ವಿಕೆಟ್ಗಳ ನಷ್ಟಕ್ಕೆ ಅನಾಯಾಸವಾಗಿ ಗೆಲುವಿನ ದಡ ಸೇರಿತು. ಆರಂಭಿಕರಾಗಿ ಮೈದಾನಕ್ಕಿಳಿದ ಸಂಜು ಸ್ಯಾಮ್ಸನ್ 29, ಅಭಿಶೇಕ್ ಶರ್ಮಾ 16 ರನ್ ಬಾರಿಸಿ ಉತ್ತಮ ಅಡಿಪಾಯ ಹಾಕಿದರು. ಬಳಿಕ ಬಂದ ಸೂರ್ಯ ಕುಮಾರ್ ಯಾದವ್ (29) ರನ್ ಗಳಿಸಿದರು. ನಂತರ ನಿತೀಶ್ ರೆಡ್ಡಿ (16) ಜೊತೆಯಾದ ಹಾರ್ದಿಕ್ ಪಾಂಡ್ಯ ಕೇವಲ 16 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಬಾರಿಸಿ ತಂಡವನ್ನು ಗೆಲ್ಲಿಸಿದರು.
ಇದಕ್ಕೂ ಮುನ್ನ ಟೀಂ ಇಂಡಿಯಾ ಬೌಲಿಂಗ್ ದಾಳಿಗೆ ಬಾಂಗ್ಲಾ ಆಟಗಾರರು ರನ್ ಗಳಿಸಲು ಪರದಾಡಿದರು. ಬಾಂಗ್ಲಾ 14 ರನ್ ಗಳಿಸುವಷ್ಟರಲ್ಲಿ ಆರಂಭಿಕರನ್ನು ಅರ್ಶದೀಪ್ ಪೆವಿಲಿಯನ್ಗಟ್ಟಿ ಎದುರಾಳಿ ತಂಡಕ್ಕೆ ಆಘಾತ ನೀಡಿದರು. ಬಳಿಕ ಬಂದ ಬಾಂಗ್ಲಾ ನಾಯಕ ನಜ್ಮುಲ್ ಹೊಸೈನ್ ಶಾಂಟೊ 27 ರನ್ ಗಳಿಸಿದರೂ ಮಧ್ಯಮ ಕ್ರಮಾಂಕದಲ್ಲಿ ಯಾವುದೇ ಬ್ಯಾಟ್ಸಮನ್ಗಳು ಭಾರತದ ಬೌಲರ್ಗಳನ್ನು ಎದುರಿಸಲು ಸಾಧ್ಯವಾಗಲಿಲ್ಲ. ಮೆಹದಿ ಹಸನ್ ಮಿರಾಜ್ 35 ರನ್ ಗಳಿಸಿ ಅಜಯರಾಗಿ ಉಳಿದಿದ್ದು ಬಿಟ್ಟುರೆ, ಇನ್ನುಳಿದವರು ಎರಡಂಕಿ ದಾಟಲು ಕಷ್ಟಸಾಧ್ಯವಾಯಿತು.
ಟೀಂ ಇಂಡಿಯಾ ಮಾರಕ ಬೌಲಿಂಗ್: ಭಾರತದ ಬೌಲರ್ಗಳ ಕರಾರುವಕ್ಕಾದ ಬೌಲಿಂಗ್ ದಾಳಿಗೆ ಎದುರಾಗಿ ಬ್ಯಾಟ್ಸಮನ್ಗಳು ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಅರ್ಶದೀಪ್ ಸಿಂಗ್, ವರುಣ್ ಚರ್ಕವರ್ತಿ ತಲಾ 3 ವಿಕೆಟ್ ಪಡೆದರು. ಹಾರ್ದಿಕ್ ಪಾಂಡ್ಯ, ಮಯಾಂಕ್ ಯಾದವ್ ಮತ್ತು ವಾಷಿಂಗ್ಟನ್ ಸುಂದರ್ ತಲಾ 1 ವಿಕೆಟ್ ಕಬಳಿಸಿದರು. 3.5 ಓವರ್ನಲ್ಲಿ 14 ರನ್ ನೀಡಿ 3 ವಿಕೆಟ್ ಪಡೆದ ಅರ್ಶದೀಪ್ ಪ್ಲೇಯರ್ ಆಫ್ ದಿ ಮ್ಯಾಚ್ ಪುರಸ್ಕಾರಕ್ಕೆ ಭಾಜನರಾದರು.