ಸುರಪುರ (ಯಾದಗಿರಿ): ಜಿಲ್ಲೆಯಲ್ಲಿ ದಿನೇದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಹುಣಸಗಿ ಪಟ್ಟಣದ ಶಿಕ್ಷಕರೊಬ್ಬರಿಗೆ ಸೋಂಕು ಹರಡಿರುವ ಪ್ರಕರಣ ವರದಿಯಾಗಿದೆ.
ಈ ಶಿಕ್ಷಕ ನಿನ್ನೆ ನಡೆದ ಪರೀಕ್ಷೆಯಲ್ಲಿ ಕೆಂಭಾವಿ ಪರೀಕ್ಷಾ ಕೇಂದ್ರದಲ್ಲಿ ಸೇವೆಯಲ್ಲಿ ತೊಡಗಿದ್ದರು. ಈ ಹಿನ್ನೆಲೆ ಕೆಂಭಾವಿ ಪಟ್ಟಣದಲ್ಲಿ 6 ಪರೀಕ್ಷಾ ಕೇಂದ್ರಗಳಿವೆ. ನಾಳಿನ ಪರೀಕ್ಷೆಗೆಂದು ಪುರಸಭೆಯಿಂದ ಪಟ್ಟಣದ ಪದವಿಪೂರ್ವ ಕಾಲೇಜು, ಮೂರಾರ್ಜಿ ವಸತಿ ಶಾಲೆ, ಹೋಲಿಪೇಥ್ ಸ್ಕೂಲ್, ಹೇಮರೆಡ್ಡಿ ಮಲ್ಲಮ್ಮ ಶಾಲೆ, ಬಾಲಕಿಯರ ಹೈಸ್ಕೂಲ್ಗಳಿಗೆ ಸ್ಯಾನಿಟೈಸ್ ಮಾಡಲಾಗಿದೆ.
ವಲಯದ ವಿವಿಧೆಡೆಯಿಂದ ಸುಮಾರು 1,300 ಮಕ್ಕಳು ಪರೀಕ್ಷೆ ಬರೆಯುತ್ತಿದ್ದಾರೆ. ಮೊದಲ ಪರೀಕ್ಷೆ ಯಶಸ್ವಿಯಾಗಿದ್ದು, ಅದರಂತೆಯೇ ಮುಂದಿನ ಪರೀಕ್ಷೆಗಳು ಸುಗಮವಾಗಿ ಆರೋಗ್ಯಕರವಾಗಿರಲಿ ಎಂದು ಮುತುವರ್ಜಿವಹಿಸಲಾಗುತ್ತಿದೆ.
ಪರೀಕ್ಷಾ ಕೇಂದ್ರಗಳ ಗೋಡೆಗಳು, ಕುಳಿತುಕೊಳ್ಳುವ ಬೆಂಚ್, ಶೌಚಾಲಯ ಹಾಗೂ ಹೊರಾಂಗಣ, ಆಫೀಸ್ ರೂಮ್ ಹೀಗೆ ಎಲ್ಲಾ ಕಡೆ ಸ್ಯಾನಿಟೈಸ್ ಮಾಡಿದರು.
ಕೆಂಭಾವಿಯಲ್ಲಿನ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಕೊರೊನಾ ಆತಂಕ ಹೆಚ್ಚಾಗಿದೆ. ನಾಳಿನ ಪರೀಕ್ಷೆ ಆತಂಕವಿಲ್ಲದೆ ನಡೆಯಲಿ ಎಂಬುದು ಎಲ್ಲರ ಹಾರೈಕೆಯಾಗಿದೆ.