ವಿಜಯಪುರ: ಬೆಳಗಾವಿ ಮತ್ತು ಕಾರವಾರ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ನೀಡಿದ ಹೇಳಿಕೆಗೆ ಇಂಡಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಯಶವಂತರಾಯಗೌಡ ಪಾಟೀಲ, ಪ್ರಜ್ಞಾವಂತ ನಾಯಕರು ತಮ್ಮ ಮಿತಿಗಳನ್ನು ಮೀರಿ ಮಾತನಾಡಬಾರದು ಎಂದು ಹೇಳಿದರು. ಇಂತಹ ವಿಷಯಗಳನ್ನು ಕೆದಕಿ ಜನರಲ್ಲಿ ಕಿಚ್ಚು ಹಚ್ಚುವ ಕೆಲಸ ಮಾಡಬಾರದು. ಸಣ್ಣ ವಿಚಾರಗಳನ್ನು ರಾಜಕೀಯವಾಗಿ ಬಳಕೆ ಮಾಡಬಾರದು ಎಂದು ಸಲಹೆ ಇತ್ತರು. ನಾವೆಲ್ಲರೂ ದೇಶದಲ್ಲಿ ಅಣ್ಣ -ತಮ್ಮಂದಿರಂತೆ ಬಾಳಿ ಬದುಕಬೇಕಿದೆ. ಈ ರೀತಿ ಕಿಡಿ ಹೊತ್ತಿಸೋದು ಸರಿಯಲ್ಲ ಎಂದು ಹೇಳಿದರು.
ವೀರಶೈವ ಲಿಂಗಾಯತ ನಿಗಮ ಸ್ಥಾಪನೆ ಕುರಿತು ಪ್ರತಿಕ್ರಿಯೆ:
ಇನ್ನೂ, ವೀರಶೈವ ಲಿಂಗಾಯತ ನಿಗಮ ಸ್ಥಾಪನೆ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಸ್ವಾಗತಿಸಿದ್ದಾರೆ. ವೀರಶೈವ ಲಿಂಗಾಯತ ಸಮಾಜದಲ್ಲಿ ಸಾಕಷ್ಟು ಬಡವರು, ಹಿಂದುಳಿದವರಿದ್ದು, ಈ ನಿರ್ಣಯ ಸಮಾಜದ ಸರ್ವತೋಮುಖ ಏಳಿಗೆಗೆ ಸಹಕಾರಿಯಾಗಲಿದೆ ಎಂದರು. ನಿಗಮಕ್ಕೆ ಇಷ್ಟೇ ಹಣ ಕೊಡಿ ಎಂದು ನಾವು ಕೇಳುವುದಿಲ್ಲ, ಕೊರೊನ ಸಂಕಷ್ಟದ ಸಂದರ್ಭದಲ್ಲಿ ಕೇಳುವುದು ತಪ್ಪು. ಅಭಿವೃದ್ಧಿ ಮಂಡಳಿ ಈಗ ಸ್ಥಾಪನೆಯಾಗಿದ್ದು, ಹಂತ ಹಂತವಾಗಿ ಅನುದಾನ ನೀಡಿ ಬಡವರ ಸಹಾಯಕ್ಕೆ ನಿಲ್ಲಬೇಕು ಎಂದರು. ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಸಿಎಂ ಯಡಿಯೂರಪ್ಪವರರಿಗೆ ಅಭಿನಂದನೆ ತಿಳಿಸಿ, ಸಮುದಾಯವನ್ನು 2ಎ ನಲ್ಲಿ ಸೇರ್ಪಡಿಸಬೇಕು ಎಂದು ಆಗ್ರಹಿಸಿದರು.
ವಿರೋಧವೇಕೆ?:
ಕೆಲವು ಮಠಾಧೀಶರು, ಲಿಂಗಾಯತ ಮುಖಂಡರು ಅಭಿವೃದ್ಧಿ ಮಂಡಳಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಕುರಿತು ಪ್ರತಿಕ್ರಿಯಿಸಿ, ನಿನ್ನೆಯಷ್ಟೇ ಹುಟ್ಟಿದ ಕೂಸು ಅದು. ಒಂದೇ ದಿನಕ್ಕೆ ಬೆಳೆಯಬೇಕು ಅನ್ನೋದು ಸರಿಯಲ್ಲ. ಪ್ರಾಂಜಲ ಮನಸ್ಸಿನಿಂದ ಸ್ವೀಕರಿಸೋ ಗುಣವಿರಬೇಕು ಎಂದು ಸಲಹೆ ನೀಡಿದರು. ಅಲ್ಲದೇ, ಪಕ್ಷ ಯಾವುದೇ ಇರಲಿ ಒಳ್ಳೆಯ ವಿಚಾರಗಳಿಗೆ ಬೆಂಬಲ ಕೊಡಬೇಕು ಎಂದರು.
ಸಿದ್ದಗಂಗಾ ಶ್ರೀ ಅಸಮಾಧಾನ:
ತುಮಕೂರಿನ ಸಿದ್ದಗಂಗಾ ಶ್ರೀಗಳು ನಿಗಮ ಸ್ಥಾಪನೆಗೆ ಅಸಮಾಧಾನ ವ್ಯಕ್ತಪಡಿಸಿರುವ ಕುರಿತು ಮಾತನಾಡಿ, ಅವರು ಯಾವ ದೃಷ್ಟಿಕೋನದಲ್ಲಿ ಹಾಗೆ ಹೇಳಿದ್ದಾರೋ ಗೊತ್ತಿಲ್ಲ. ನಮಗೆ ಕಾವಿ ಹಾಕಿದ ಎಲ್ಲಾ ಮಠಾಧಿಶರ ಮೇಲೂ ಗೌರವವಿದೆ.
ನಮಗೆ ಸ್ವಾಮೀಜಿಗಳಲ್ಲಿ ದೊಡ್ಡವರು ಸಣ್ಣವರು ಅಂತಾ ಬೇಧ ಇಲ್ಲ ಎಂದರು.