ವಿಜಯಪುರ: ಆಲಮಟ್ಟಿ ಜಲಾಶಯಕ್ಕೆ ದಿನೇ ದಿನೆ ಒಳಹರಿವು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೆಪಿಸಿಎಲ್ಗೆ 1 ಟಿಎಂಸಿ ನೀರನ್ನು ನದಿಪಾತ್ರದ ಬಲಭಾಗಕ್ಕೆ ಬಿಟ್ಟಿದ್ದು ಆಲಮಟ್ಟಿ ವಿದ್ಯುತ್ ಉತ್ಪಾದನಾ ಘಟಕ ವಿದ್ಯುತ್ ಉತ್ಪಾದನೆ ಆರಂಭಿಸಿದೆ.
ನಿನ್ನೆ ಸಂಜೆಯವರೆಗೆ 1 ಟಿಎಂಸಿ ನೀರು ಬಿಟ್ಟ ಪರಿಣಾಮ ವಿದ್ಯುತ್ ಘಟಕದ 55 ಮೆಗಾವ್ಯಾಟ್ ಸಾಮರ್ಥ್ಯದ ಎರಡು ಘಟಕಗಳಿಂದ 16.80 ಲಕ್ಷ ಯುನಿಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. 290 ಮೆಗಾವ್ಯಾಟ್ ಗರಿಷ್ಠ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಆಲಮಟ್ಟಿ ವಿದ್ಯುತ್ ಘಟಕದ 6 ಘಟಕಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲು ಒಟ್ಟು 45 ಸಾವಿರ ಕ್ಯೂಸೆಕ್ ನೀರು ಹರಿಬಿಡಬೇಕಾಗಿದೆ.
ಸದ್ಯ 12 ಸಾವಿರ ಕ್ಯೂಸೆಕ್ ನೀರು ಬಿಟ್ಟಿರುವ ಕಾರಣ ಎರಡು ಘಟಕಗಳು ಕಾರ್ಯ ಆರಂಭಿಸಿವೆ. ಕಳೆದ ವರ್ಷ ಮಳೆಗಾಲದಲ್ಲಿ ನೀರು ಬಿಡದ ಕಾರಣ ವಿದ್ಯುತ್ ಉತ್ಪಾದನೆ ಸಾಧ್ಯವಾಗಿರಲಿಲ್ಲ. ಮುಂದಿನ ದಿನದಲ್ಲಿ ಉತ್ತಮ ಮಳೆಯಾದರೆ ಘಟಕಗಳು ಕಾರ್ಯಾರಂಭ ಮಾಡುವ ಆಶಾಭಾವನೆಯನ್ನು ಅಧಿಕಾರಿಗಳು ಹೊಂದಿದ್ದಾರೆ.
ಗರಿಷ್ಠ ನೀರು ಸಂಗ್ರಹ:
519.60 ಮೀಟರ್ ಗರಿಷ್ಠ ಸಾಮರ್ಥ್ಯ ಹೊಂದಿರುವ ಆಲಮಟ್ಟಿ ಜಲಾಶಯಕ್ಕೆ ನಿನ್ನೆ 45.50 ಟಿಎಂಸಿ ನೀರು ಹರಿದು ಬಂದಿದೆ. ಸದ್ಯ ಜಲಾಶಯದಲ್ಲಿ 512.70 ಮೀಟರ್ವರೆಗೆ ನೀರು ಸಂಗ್ರಹವಾಗಿದೆ.