ಬೆಂಗಳೂರು: ನಗರದಲ್ಲಿ ವಾಸವಾಗಿರುವ ಜಪಾನ್ ಮೂಲದ ಪ್ರಜೆಯೊಬ್ಬರಿಗೆ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಬೆದರಿಸಿ 35.49 ಲಕ್ಷ ರೂ. ವಂಚಿಸಿರುವ ಘಟನೆ ನಡೆದಿದೆ. ಬೆಂಗಳೂರಿನಲ್ಲಿ ನೆಲೆಸಿರುವ ಜಪಾನ್ ಮೂಲದ 59 ವರ್ಷದ ವ್ಯಕ್ತಿ ನೀಡಿರುವ ದೂರಿನ ಅನ್ವಯ ಆಗ್ನೇಯ ವಿಭಾಗದ ಸೈಬರ್ ಕ್ರೈಮ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೂರುದಾರರಿಗೆ ಡಿಸೆಂಬರ್ 12ರಂದು ಟೆಲಿಫೋನ್ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾದ ಪ್ರತಿನಿಧಿಗಳ ಹೆಸರಿನಲ್ಲಿ ಕರೆ ಮಾಡಿದ್ದ ವಂಚಕರು, 'ನಂಬರ್ ಬ್ಲಾಕ್ ಮಾಡುತ್ತಿರುವುದಾಗಿ' ತಿಳಿಸಿದ್ದರು. ನಂತರ ಮುಂಬೈ ಪೊಲೀಸ್ ಅಧಿಕಾರಿಯ ಸೋಗಿನಲ್ಲಿ ಕರೆ ಮಾಡಿದ್ದ ಮತ್ತೋರ್ವ ವಂಚಕ, 'ನೀವು ಮನಿ ಲಾಂಡರಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದೀರಿ'. ಆದ್ದರಿಂದ ತನಿಖೆಯ ಕಾರಣದಿಂದ ಡಿಜಿಟಲ್ ಅರೆಸ್ಟ್ ಮಾಡುತ್ತಿರುವುದಾಗಿ ಬೆದರಿಸಿದ್ದರು. ನಂತರ ವಿಚಾರಣೆಯ ಸಲುವಾಗಿ ಬ್ಯಾಂಕ್ ಖಾತೆಯನ್ನ ಪರಿಶೀಲಿಸಬೇಕಿದೆ. ತನಿಖೆ ಮುಗಿದ ಬಳಿಕ ನಿಮ್ಮ ಹಣ ಹಿಂದಿರುಗಿಸುತ್ತೇವೆ ಎಂದು ಡಿಸೆಂಬರ್ 12ರಿಂದ 14ರ ಅವಧಿಯೊಳಗೆ ಆರ್‌ಟಿಜಿಎಸ್, ಐಎಂಪಿಎಸ್ ಮೂಲಕ ಒಟ್ಟು 35.49 ಲಕ್ಷ ರೂ. ಹಣವನ್ನು ವಂಚಕರು ವರ್ಗಾಯಿಸಿಕೊಂಡಿದ್ದಾರೆ.
ಆದರೆ ಹಣ ಮರಳಿಸದಿದ್ದಾಗ ತಾವು ವಂಚನೆಗೊಳಗಾದ ಬಗ್ಗೆ ಅರಿತ ಜಪಾನ್ ಪ್ರಜೆ ಆಗ್ನೇಯ ವಿಭಾಗದ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿರುವುದಾಗಿ ತಿಳಿಸಿದರು.
ಡಿಜಿಟಲ್ ಅರೆಸ್ಟ್ ಬಗ್ಗೆ ತಿಳಿದುಕೊಳ್ಳಿ: ಡಿಜಿಟಲ್ ಅರೆಸ್ಟ್ ಪ್ರಕರಣಗಳ ಬಗ್ಗೆ ಪೊಲೀಸರು ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ಸಹ ವಂಚನೆ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಕಾನೂನಿನಲ್ಲಿ ಡಿಜಿಟಲ್ ಅರೆಸ್ಟ್ ಪದ್ಧತಿಯೇ ಇಲ್ಲ. ಯಾವುದೇ ತನಿಖಾ ಸಂಸ್ಥೆಗಳು ಡಿಜಿಟಲ್ ಅರೆಸ್ಟ್ ಮಾಡುವುದಿಲ್ಲ. ಅರೆಸ್ಟ್ ಮಾಡುವುದಾದರೆ ಮೊದಲು ನೋಟಿಸ್ ನೀಡಲಾಗುತ್ತದೆ ಅಥವಾ ಖುದ್ದಾಗಿ ಪೊಲೀಸರು ಭೇಟಿ ನೀಡಿ ಬಂಧಿಸುತ್ತಾರೆ. ಆದ್ದರಿಂದ ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಕರೆ ಮಾಡಿದರೆ ಜನರು ಜಾಗೃತರಾಗಬೇಕು. ಜೊತೆಗೆ, ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕು ಎಂದು ಪೊಲೀಸರು ಈಗಾಗಲೇ ಜನರಿಗೆ ಸಲಹೆ ನೀಡಿದ್ದರು.
ಇತ್ತೀಚೆಗೆ ಬೆಂಗಳೂರಿನ ಟೆಕ್ಕಿಯೊಬ್ಬರನ್ನು ವಂಚಕರು ಸುಮಾರು ಒಂದು ತಿಂಗಳ ಕಾಲ ಡಿಜಿಟಲ್ ಅರೆಸ್ಟ್ ಹೆಸರಲ್ಲಿ 11 ಕೋಟಿಗೂ ಅಧಿಕ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡು ಮೋಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿತ್ತು.
ಇದನ್ನೂ ಓದಿ: 11 ತಿಂಗಳಲ್ಲಿ 641 ಪ್ರಕರಣ; ಏನಿದು ಡಿಜಿಟಲ್ ಅರೆಸ್ಟ್, ಜನ ವಹಿಸಬೇಕಿರುವ ಎಚ್ಚರಿಕೆಗಳೇನು?
ಇದನ್ನೂ ಓದಿ: ಒಂದು ತಿಂಗಳು ಡಿಜಿಟಲ್ ಅರೆಸ್ಟ್: ಬೆಂಗಳೂರಿನ ಸಾಫ್ಟ್‌ವೇರ್ ಉದ್ಯೋಗಿಗೆ 11.83 ಕೋಟಿ ರೂ. ವಂಚನೆ