ಚಿಕ್ಕೋಡಿ/ಉಡುಪಿ : ಮಣಿಪುರದ ಇಂಪಾಲ ಜಿಲ್ಲೆಯ ಬೊಂಬಾಲ ಕಣಿವೆಯಲ್ಲಿ ಸೇನಾ ವಾಹನ ಉರುಳಿ ಹುತಾತ್ಮರಾಗಿದ್ದ ಯೋಧ ಧರ್ಮರಾಜ ಖೋತ (42) ಹಾಗೂ ಜಮ್ಮು ಕಾಶ್ಮೀರದ ಪೂಂಚ್ನಲ್ಲಿ ಡಿ. 25 ರ ಮಂಗಳವಾರ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಕುಂದಾಪುರದ ಬೀಜಾಡಿಯ ಯೋಧ ಲ್ಯಾನ್ಸ್ ಹವಾಲ್ದಾರ್ ಅನೂಪ್ ಪೂಜಾರಿ (31) ಅವರ ಅಂತ್ಯಕ್ರಿಯೆಯನ್ನು ಇಂದು ನೆರವೇರಿಸಲಾಯಿತು. ಈ ವೇಳೆ ತಾಯಿ, ಪತ್ನಿ ಹಾಗೂ ಕುಟುಂಬಸ್ಥರು ಅಂತಿಮ ದರ್ಶನ ಪಡೆದರು.
ಯೋಧ ಅನೂಪ್ ಪೂಜಾರಿ (31) ಅವರ ಪಾರ್ಥಿವ ಶರೀರವನ್ನು ಬುಧವಾರ ತಡರಾತ್ರಿ ಬಜಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಯಿತು.
ತೆರೆದ ವಾಹನದಲ್ಲಿ ಮೆರವಣಿಗೆ : ಇಂದು (ಡಿ. 26ರ) ಬೆಳಗ್ಗೆ 9ಕ್ಕೆ ತೆಕ್ಕಟ್ಟೆಯಿಂದ ತೆರೆದ ವಾಹನದಲ್ಲಿ ಅವರ ಪಾರ್ಥಿವ ಶರೀರವನ್ನು ಕೋಟೇಶ್ವರ ಮೂಲಕ ಮೆರವಣಿಗೆ ನಡೆಸಿ ಇದೀಗ ಹುಟ್ಟೂರಾದ ಬೀಜಾಡಿಗೆ ತರಲಾಗಿದೆ. ಕಾಶ್ಮೀರದಲ್ಲಿ ಲ್ಯಾನ್ಸ್ ಹವಾಲ್ದಾರ್ ಅನೂಪ್ ಪೂಜಾರಿ ಸಾವನ್ನಪ್ಪಿದ್ದು, ಕುಂದಾಪುರ ಬೀಜಾಡಿಯ ಜನ ನೋವಿನ ಜೊತೆ ದೇಶಾಭಿಮಾನ ತೋರುತ್ತಿದ್ದಾರೆ. ಯೋಧರ ಅಂತಿಮ ಯಾತ್ರೆ ಸಾಗುವ ರಸ್ತೆಯಲ್ಲೆಲ್ಲಾ ರಂಗೋಲಿಗಳನ್ನು ರಚಿಸಿ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ರಸ್ತೆಯುದ್ದಕ್ಕೂ ಕಟೌಟ್ಗಳು, ರಂಗೋಲಿಗಳು, ನಮನದ ಬರಹಗಳು ರಾರಾಜಿಸುತ್ತಿವೆ. ಈ ಮೂಲಕ ಜನ ಭಾರತಾಂಬೆಯ ಪುತ್ರನಿಗೆ ಗೌರವ ಸಲ್ಲಿಸಿದರು.
ಕೋಟೇಶ್ವರ, ಬೀಜಾಡಿ, ಗೋಪಾಡಿಯಲ್ಲಿ ಅನೂಪ್ ಪೂಜಾರಿ ಅವರ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಲು 4000ಕ್ಕೂ ಅಧಿಕ ಗ್ರಾಮಸ್ಥರು ಭಾಗವಹಿಸಿದ್ದರು. ಅನೂಪ್ ಪೂಜಾರಿ ಅವರ ತಾಯಿ ಚಂದು ಪೂಜಾರಿ, ಪತ್ನಿ ಮಂಜುಶ್ರೀ, ಇಶಾನ್ವಿ ಹಾಗೂ ಕುಟುಂಬಸ್ಥರು ಅಂತಿಮ ದರ್ಶನ ಪಡೆದರು. ಅವರ ಮನೆಯಲ್ಲಿ ಸಕಲ ವಿಧಿಗಳನ್ನು ನೆರವೇರಿಸಿ, ಅಂತಿಮ ಸಂಸ್ಕಾರಕ್ಕೆ ಮೊದಲು ಬೀಜಾಡಿ ಪಡು ಶಾಲೆಯ ಆವರಣದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. ಅನಂತರ ಬೀಜಾಡಿ ಕಡಲ ಕಿನಾರೆಯ ಸರ್ಕಾರಿ ಜಾಗದಲ್ಲಿ ಸರ್ಕಾರದ ಗೌರವದೊಡನೆ ಅಂತಿಮ ಸಂಸ್ಕಾರ ನಡೆಸಲಾಯಿತು.
ಗಣ್ಯರಿಂದ ವೀರ ಯೋಧನಿಗೆ ನಮನ ಸಲ್ಲಿಕೆ : ಜಿಲ್ಲೆಯ ವಿವಿಧ ಇಲಾಖೆಗಳು ಸೇರಿದಂತೆ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಹಾಗೂ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಸೇನಾಧಿಕಾರಿಗಳು, ಜಿಲ್ಲೆಯ ಐವರು ಶಾಸಕರು ಸಹ ಅಂತಿಮ ನಮನವನ್ನು ಸಲ್ಲಿಸಿದರು.
ಉಡುಪಿ ಎಡಿಸಿ ಮಮತಾದೇವಿ ಅವರಿಂದ ಸಾಂತ್ವನ : ಸರ್ಕಾರದ ಸಕಲ ಗೌರವಗಳನ್ನು ಕೊಟ್ಟಿದ್ದೇವೆ. ಮನೆಯವರಿಗೆ ಸಾಂತ್ವನ ಹೇಳಿದ್ದೇವೆ, ದೇವರು ಅವರಿಗೆ ದುಃಖ ಸಹಿಸುವ ಶಕ್ತಿ ಕೊಡಲಿ. ಜಿಲ್ಲಾಡಳಿತದಿಂದ ಎಲ್ಲಾ ಗೌರವಗಳನ್ನು ಸಲ್ಲಿಕೆ ಮಾಡಿದ್ದೇವೆ ಎಂದರು.
ಅನೂಪ್ ಪತ್ನಿ ಮಂಜುಶ್ರೀ ಹೇಳಿಕೆ : ಜಮ್ಮು ಕಾಶ್ಮೀರದಲ್ಲಿ ಎರಡು ವರ್ಷ ಸೇವೆ ಮಾಡಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ನಾವು ಜೊತೆಗೆ ಇದ್ದೆವು. ಕಾಶ್ಮೀರದ ಪೂಂಚ್ ಅಟ್ಯಾಕ್ ನಂತರ ಅಲ್ಲಿಗೆ ನೇಮಕ ಆದರು. ಪೂಂಚ್ನಲ್ಲಿ ಒಂದೂವರೆ ವರ್ಷ ಸೇವೆ ಮಾಡಿದ್ದಾರೆ. ಕಾಶ್ಮೀರದ ಯೂನಿಟ್ ಆರು ತಿಂಗಳಲ್ಲಿ ಗುಜರಾತಿಗೆ ಹೋಗಬೇಕಾಗಿತ್ತು. ನನಗೆ ಗಂಡ ಪ್ರತಿದಿನ ಫೋನ್ ಮಾಡುತ್ತಾರೆ, ಮೊನ್ನೆ ಫೋನ್ ಬರದೆ ಇದ್ದಾಗ ನನಗೆ ಆತಂಕ ಶುರುವಾಯಿತು. ಕಾಶ್ಮೀರದ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿತ್ತು. ಸ್ವಲ್ಪ ಹೊತ್ತಿನ ನಂತರ ಫೋನ್ ಸ್ವಿಚ್ ಆಫ್ ಆಯ್ತು. ಮಿಲಿಟರಿ ವಾಹನ ಬಿದ್ದಿರುವ ಮಾಹಿತಿಯೂ ಗೊತ್ತಾಯ್ತು, ದಿನಪೂರ್ತಿ ಕಾದೆ. ಆಮೇಲೆ ಬೆಳಗ್ಗೆ ಮಾಹಿತಿ ಸಿಕ್ಕಿತು. ಮಿಲಿಟರಿ ಸೇರಿ 13 ವರ್ಷ ಆಗಿದೆ. ಇನ್ನೂ ನಾಲ್ಕು ವರ್ಷ ಸೇವೆ ಮಾಡುತ್ತೇವೆ ಎಂದು ಹೇಳುತ್ತಿದ್ದರು. ಮಿನಿಮಮ್ ಸರ್ವಿಸ್ ಮಾಡದೆ ಬಂದರೆ ನನಗೆ ಬೆಲೆ ಇಲ್ಲ ಎಂದು ಹೇಳುತ್ತಿದ್ದರು ಎಂದು ಕಂಬನಿ ಮಿಡಿದರು.
ಸರ್ಕಾರಿ ಗೌರವದೊಂದಿಗೆ ಯೋಧ ಧರ್ಮರಾಜ ಖೋತ ಅಂತಿಮ ಸಂಸ್ಕಾರ: ಯೋಧ ಧರ್ಮರಾಜ ಖೋತ ಅವರ ಹುಟ್ಟೂರಾದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕುಪ್ಪಾನವಾಡಿ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತಿಮ ಸಂಸ್ಕಾರ ನೆರವೇರಿತು. ಬೆಳಗ್ಗೆ 10 ಗಂಟೆಗೆ ಬೆಳಗಾವಿಯಿಂದ ಪಾರ್ಥಿವ ಶರೀರ ಚಿಕ್ಕೋಡಿಗೆ ತರಲಾಯಿತು. ಚಿಕ್ಕೋಡಿಯಿಂದ ಹುಟ್ಟೂರು ಕುಪ್ಪಾನವಾಡಿವರೆಗೂ ತೆರೆದ ವಾಹನದಲ್ಲಿ ಯೋಧ ಧರ್ಮರಾಜ ಅವರ ಮೆರವಣಿಗೆ ನಡೆಸಲಾಯಿತು. ಬಳಿಕ ಧರ್ಮರಾಜ ಅವರ ಮನೆಗೆ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗುತ್ತಿದ್ದಂತೆ ಪಾರ್ಥಿವ ಶರೀರ ಕಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಇದೇ ವೇಳೆ ಧರ್ಮರಾಜ ಪತ್ನಿ ಶೃದ್ದಾ ಹಾಗೂ ಇಬ್ಬರು ಮಕ್ಕಳು, ತಂದೆ -ತಾಯಿಗೆ ಧರ್ಮರಾಜ ಅವರ ಅಂತಿಮ ದರ್ಶನ ಮಾಡಿಸಲಾಯಿತು. ಈ ವೇಳೆ ಪತ್ನಿ ಶ್ರದ್ದಾ ಪತಿಯ ಪಾರ್ಥಿವ ಶರೀರದ ಮುಂದೆ ನಿಂತು 'ಅಮರ ರಹೆ ಅಮರ ರಹೆ' ಎಂದು ಘೋಷಣೆ ಘೋಷಣೆ ಕೂಗಿ ಅಂತಿಮ ನಮನ ಸಲ್ಲಿಸಿದರು.
ಬಳಿಕ ಧರ್ಮರಾಜ ಅವರ ಸ್ವಂತ ಜಮೀನಿನಲ್ಲಿ ಅಂತ್ಯಕ್ರಿಯೆಗೂ ಮೊದಲು ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಕುಪ್ಪಾನವಾಡಿ ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳು ಅಂತಿಮ ದರ್ಶನ ಪಡೆದ ಬಳಿಕ ಜಿಲ್ಲಾಡಳಿತ, ಸೇನೆ ಹಾಗೂ ಪೊಲೀಸ್ ಇಲಾಖೆಯಿಂದ ಗೌರವ ಅರ್ಪಣೆ ಮಾಡಲಾಯಿತು. ಸೇನೆಯಿಂದ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಕೆ ಬಳಿಕ ಜೈನ ಧರ್ಮದ ವಿಧಿ-ವಿಧಾನಗಳ ಪ್ರಕಾರ ಅಗ್ನಿ ಸ್ಪರ್ಶದ ಮೂಲಕ ಹುತಾತ್ಮ ಯೋಧ ಧರ್ಮರಾಜ ಖೋತ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಈ ವೇಳೆ ಮಾತನಾಡಿದ ಪತ್ನಿ ಶೃದ್ದಾ, ಪತಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದು ಹೆಮ್ಮೆಯಿದೆ. ಯೋಧನ ಪತ್ನಿ ಎಂದು ಕರೆಸಿಕೊಳ್ಳಲು ಹೆಮ್ಮೆ ಎನಿಸುತ್ತಿದೆ. ಓರ್ವ ಯೋಧನ ಪತ್ನಿಯಾಗಿ ಹೆಮ್ಮೆಯಿಂದ ನನ್ನ ಸಂಸಾರವನ್ನ ನಡೆಸಿಕೊಂಡು ಹೋಗುವುದಾಗಿ ಹೇಳಿದರು.
ಇದನ್ನೂ ಓದಿ : ಮಣಿಪುರದಲ್ಲಿ ಸೇನಾ ವಾಹನ ಅಪಘಾತ: ಇನ್ನೆರಡು ತಿಂಗಳಲ್ಲಿ ನಿವೃತ್ತಿ ಹೊಂದಲಿದ್ದ ಚಿಕ್ಕೋಡಿ ಯೋಧ ಸಾವು - CHIKKODI SOLDIER DEATH