ವಿಜಯಪುರ: ತೀವ್ರ ಜ್ವರದಿಂದ ಬಳಲುತ್ತಿದ್ದ ರೋಗಿಯೊಬ್ಬರು ಆಸ್ಪತ್ರೆಗೆ ಹೋಗಲು ಆ್ಯಂಬುಲೆನ್ಸ್ ಇಲ್ಲದೆ ಪರದಾಡಿರುವ ಘಟನೆ ಜಿಲ್ಲೆಯ ಆಲಮೇಲ ಪಟ್ಟಣದಲ್ಲಿ ನಡೆದಿದೆ.
50 ವರ್ಷದ ಶಂಕರ್ ಜಂಬಗಿ ಎಂಬುವರು ತೀವ್ರ ಜ್ವರದಿಂದ ಬಳಲುತ್ತಿದ್ದರು. ಇವರನ್ನು ಆಸ್ಪತ್ರೆಗೆ ಸೇರಿಸಲು ಪತ್ನಿ ಶೋಭಾ ಆ್ಯಂಬುಲೆನ್ಸ್ಗೆ ಸತತ ಎರಡು ಗಂಟೆಗಳ ಕಾಲ ಕಾದು, ಸಾರ್ವಜನಿಕರ ಬಳಿ ಸಹಾಯಕ್ಕಾಗಿ ಗೋಗರೆದಿದ್ದಾರೆ. ಆದರೆ, ಕೊರೊನಾ ಭೀತಿಯಿಂದ ಯಾರೊಬ್ಬರು ಕೂಡ ಇವರ ಸಹಾಯಕ್ಕೆ ಬಂದಿಲ್ಲ.
ಮೊದಲು ಆಲಮೇಲ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿದ್ದ ರೋಗಿಯ ಸ್ಥಿತಿ ಕಂಡ ಸಿಬ್ಬಂದಿ, ನಮ್ಮಲ್ಲಿ ಬೆಡ್ ಮತ್ತು ಟೆಸ್ಟಿಂಗ್ ಕಿಟ್ ಇಲ್ಲ. ನೀವು ವಿಜಯಪುರದ ಆಸ್ಪತ್ರೆಗೆ ಹೋಗಿ ಎಂದು ಕಳುಹಿಸಿದ್ದಾರೆ. ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿಕೊಡುವಂತೆ ಕೇಳಿಕೊಂಡರೂ ವ್ಯವಸ್ಥೆ ಮಾಡದೇ ಅಮಾನವೀಯವಾಗಿ ನಡೆದುಕೊಂಡಿದ್ದಾರೆ.
ಬಳಿಕ ಈ ದಂಪತಿ ಯಾವುದಾದ್ರೂ ವಾಹನ ಸಿಗಬಹುದೆಂಬ ನಿರೀಕ್ಷೆಯಲ್ಲಿ ರಸ್ತೆಯಲ್ಲಿ ನಿತ್ರಾಣ ಸ್ಥಿತಿಯಲ್ಲಿ ಅಡ್ಡಾಡಿದ್ದಾರೆ. ಆದರೆ, ಭಾನುವಾರ ಲಾಕ್ಡೌನ್ ಇರುವ ಕಾರಣ ಬಸ್ ವ್ಯವಸ್ಥೆ ಕೂಡ ಇಲ್ಲದೆ, ಖಾಸಗಿ ವಾಹನವೂ ಸಿಗದೇ ಪರದಾಡಿದ್ದಾರೆ.