ಮುದ್ದೇಬಿಹಾಳ(ವಿಜಯಪುರ): ತಾಲೂಕಿನ ಹಿರೇಮುರಾಳ ಮೂಲಕ ಮಲಗಲದಿನ್ನಿ- ಅಡವಿ ಸೋಮನಾಳ ಸಂಪರ್ಕಿಸುವ ಮುಖ್ಯ ಗ್ರಾಮೀಣ ರಸ್ತೆಯನ್ನು ಕಳೆದ ಕೆಲವು ತಿಂಗಳ ಹಿಂದೆ ಅಗೆದು ಅಗಲ ಮಾಡಿ ಹಾಗೇ ಬಿಟ್ಟಿದ್ದು, ಜನರು ಓಡಾಡಲು ತೊಂದರೆ ಪಡುವಂತಾಗಿದೆ.
ಮಲಗಲದಿನ್ನಿ ಕ್ರಾಸ್‌ನಿಂದ 200 ಮೀಟರ್ ಅಂತರದಲ್ಲಿ ಹಾಯ್ದು ಹೋಗಿರುವ ಕಾಲುವೆಯಿಂದ ಕೆರೆಗೆ ನೀರು ಹರಿಸಲು ರಸ್ತೆಯನ್ನೇ ಅಗೆದಿದ್ದರು. ಆದರೆ, ಕೆರೆ ತುಂಬಿದ ಬಳಿಕವೂ ಅಗೆದಿರುವ ರಸ್ತೆಯನ್ನು ದುರಸ್ತಿಪಡಿಸದೇ ಹಾಗೆ ಬಿಟ್ಟಿದ್ದಾರೆ. ಇದರಿಂದ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗಿದೆ.
ಈ ಬಗ್ಗೆ ಈ ಟಿವಿ ಭಾರತ್‌ನೊಂದಿಗೆ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣಶೆಟ್ಟಿ ಬಣದ ಅಧ್ಯಕ್ಷ ಅರುಣಕುಮಾರ ಪಾಟೀಲ, ಈ ದಾರಿಯಲ್ಲೆಲ್ಲೂ ರಸ್ತೆ ಅಗೆದಿರುವ ಬಗ್ಗೆ ಯಾವುದೇ ಎಚ್ಚರಿಕೆ ಫಲಕಗಳನ್ನು ಹಾಕಿಲ್ಲ. ಇದರಿಂದ ವೇಗವಾಗಿ ತೆರಳುವ ವಾಹನ ಸವಾರರು ಅಪಘಾತಕ್ಕಿಡಾಗುವ ಸಂಭವವಿದೆ. ಐದಾರು ಗ್ರಾಮ ಸಂಪರ್ಕಿಸುವ ರಸ್ತೆ ಇದಾಗಿದ್ದು, ಕೆಬಿಜೆಎನ್‌ಎಲ್ ಅಧಿಕಾರಿಗಳು ಕೂಡಲೇ ರಸ್ತೆಯನ್ನು ದುರಸ್ತಿ ಮಾಡಬೇಕು. ಇಲ್ಲದಿದ್ದರೆ ಕೆಬಿಜೆಎನ್‌ಎಲ್ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಸಿದ್ದಾರೆ.