ವಿಜಯಪುರ: ಜೆಡಿಎಸ್ ಹಿರಿಯ ನಾಯಕ ಎಂ.ಸಿ. ಮನಗೂಳಿ ವಿಧಿವಶರಾದ ಹಿನ್ನೆಲೆ, ಸಿಂದಗಿ ಪಟ್ಟಣದ ಅವರ ನಿವಾಸದಲ್ಲಿ ಶೋಕ ಮಡುಗಟ್ಟಿದೆ.
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮನಗೂಳಿ ಅವರನ್ನು ಕಳೆದ ಶನಿವಾರ ಬೆಂಗಳೂರಿನ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಅವರ ನಿವಾಸದತ್ತ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದಾರೆ.
ಸಿಂದಗಿ ಮತಕ್ಷೇತ್ರದಿಂದ ಸತತ ಏಳು ಬಾರಿ ಸ್ಪರ್ಧಿಸಿದ್ದ ಎಂ.ಸಿ. ಮನಗೂಳಿ ಅವರು, ಎರಡು ಬಾರಿ ಸಚಿವರಾಗಿದ್ದರು. 1995ರಲ್ಲಿ ಜೆ.ಎಚ್.ಪಾಟೀಲ ಸರ್ಕಾರದ ಅವಧಿಯಲ್ಲಿ ಪಂಚಾಯತ್ ರಾಜ್ ಸಚಿವರಾಗಿದ್ದರು. 2018ರಲ್ಲಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ತೋಟಗಾರಿಕೆ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ತಮ್ಮ ಕ್ಷೇತ್ರದಲ್ಲಿ ಸಾರ್ವಜನಿಕರ ಜೊತೆ ಉತ್ತಮ ಒಡನಾಟ ಹೊಂದಿದ್ದರು. ತಮ್ಮ ಅಧಿಕಾರಾವಧಿಯಲ್ಲಿ ಸಿಂದಗಿ ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದರು. ತಾಲೂಕಿನ ನೀರಾವರಿ ಯೋಜನೆಗೆ ಶ್ರಮಿಸಿ, ಗುತ್ತಿ ಬಸವಣ್ಣ ಯೋಜನೆ ತರುವಲ್ಲಿ ಯಶಸ್ವಿಯಾಗಿದ್ದರು.
ಓದಿ: ಸಿಂದಗಿ ಕ್ಷೇತ್ರದಿಂದ ಸತತ ಏಳು ಬಾರಿ ಸ್ಪರ್ಧಿಸಿದ್ದ ಎಂ.ಸಿ.ಮನಗೂಳಿ!
ಇಂದು ಮಧ್ಯಾಹ್ನ ಸಿಂದಗಿ ಪಟ್ಟಣಕ್ಕೆ ಮನಗೂಳಿ ಅವರ ಪಾರ್ಥಿವ ಶರೀರ ಆಗಮಿಸಲಿದೆ. ಅವರ ನಿವಾಸದಲ್ಲಿ ಕುಟುಂಬಸ್ಥರ ದರ್ಶನದ ನಂತರ ತಾಲೂಕು ಶಿಕ್ಷಣ ಪ್ರಸಾರ ಮಂಡಳಿ ಮೈದಾನದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುವುದು. ನಾಳೆ ಬೆಳಗ್ಗೆ 11 ಗಂಟೆಗೆ ಸಕಲ ಸರ್ಕಾರಿ ಗೌರವ ಹಾಗೂ ಕೋವಿಡ್ ನಿಯಮಾನುಸಾರವಾಗಿ ಮನಗೂಳಿಯವರ ಅಂತ್ಯಕ್ರಿಯೆ ನೆರವೇರಲಿದೆ.