ವಿಜಯಪುರ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಎಕೆ 47ಇದ್ದಂತೆ. ಅವರ ಕಾರ್ಯಕ್ರಮಕ್ಕೆ ಹೋಗದಿದ್ದರೆ ಹೇಗೆ?. ಅದಕ್ಕೆ ವಿಜಯಪುರದ ನಿಗದಿತ ಕಾರ್ಯಕ್ರಮ ಮುಂದೂಡಲು ಸಾಧ್ಯವಾಗಲಿಲ್ಲ ಎಂದು ಸಿಎಂ ಬಿಎಸ್ವೈ ಬಳಿ ತಮ್ನ ದುಗುಡ ಹೇಳಿಕೊಂಡಿರುವುದನ್ನು ವಸತಿ ಸಚಿವ ವಿ. ಸೋಮಣ್ಣ ಸಮಾರಂಭದಲ್ಲಿ ಬಹಿರಂಗ ಪಡೆಸಿದರು.
ವಿಜಯಪುರದಲ್ಲಿ ಆಶ್ರಯ ಮನೆಗಳ ನಿರ್ಮಾಣಕ್ಕೆ ನಡೆದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, 25 ಕೋಟಿ ರೂ.ಗಳ ಅನುದಾನದ ಕಾರ್ಯಕ್ರಮ ನಡೆಸಬೇಕಾದರೆ ಸಿಎಂ ಜತೆ ಚರ್ಚೆ ನಡೆಸಬೇಕು. ಈ ವೇಳೆ ಅವರನ್ನು ಭೇಟಿ ಮಾಡಲು ಹೋದಾಗ ಸಿಎಂ ಕೇಳಿದ್ರು, ಏನು ವಿಜಯಪುರಕ್ಕೆ 11ರಂದು ಕಾರ್ಯಕ್ರಮ ನಿಗದಿ ಮಾಡಿದ್ದೀರಿ ಎಂದು.
ಅದಕ್ಕೆ ಯತ್ನಾಳ ಎಕೆ 47 ಇದ್ದಂಗೆ, ಮೊದಲೇ 5-6 ಬಾರಿ ಕಾರ್ಯಕ್ರಮ ಮುಂದೂಡಿದ್ದೇನೆ. ಮತ್ತೆ ಮುಂದೂಡಿದರೆ ಸರಿ ಇರಲ್ಲ, ಆ ಕಾರಣಕ್ಕೆ ಹೋಗುತ್ತಿದ್ದೇನೆ ಎಂದಿದ್ದೆ. ಅದಕ್ಕೆ ಸಿಎಂ ಸಹ ಬಸನಗೌಡ ಖುಷಿಯಾಗಿದ್ದರೆ, ಸರ್ಕಾರ ಸಹ ಖುಷಿಯಾಗಿರುತ್ತೇ ಎಂದು ಹೇಳಿ ಕಳುಹಿಸಿದ್ದಾರೆ ಎಂದರು.
ಯತ್ನಾಳ ಸ್ವಲ್ಪ ನೇರ ನುಡಿಗಾರ ಯಾರ ಮುಲಾಜಿಗೂ ಒಳಗಾಗುವುದಿಲ್ಲ. ಹೇಳುವ ವಿಷಯವನ್ನು ನೇರವಾಗಿ ಹೇಳಿ ಬಿಡುತ್ತಾರೆ ಎನ್ನುವ ಮೂಲಕ ಯತ್ನಾಳರನ್ನು ಕಾರ್ಯಕ್ರಮದ ಉದ್ದಕ್ಕೂ ಹೊಗಳಿದರು.
ಪ್ರಧಾನಮಂತ್ರಿ ವಸತಿ ಯೋಜನೆ ಅಡಿಯಲ್ಲಿ ಮಂಜೂರಾದ ಆಶ್ರಯ ಮನೆಗಳ ನಿರ್ಮಾಣ ಕಾರ್ಯಕ್ಕೆ ಇಂದು ಭೂಮಿ ಪೂಜೆ ನೇರವೇರಿಸಿದ್ದು, ಮಹಾನಗರ ಪಾಲಿಕೆಯ 31 ಎಕರೆ ಪ್ರದೇಶದಲ್ಲಿ 3750 ಆಶ್ರಯ ಮನೆಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಮೊದಲ ಹಂತದಲ್ಲಿ 1493 ಮನೆಗಳ ಕಾರ್ಯ ನಡೆಯಲಿದೆ.