ವಿಜಯಪುರ : ಜಿಲ್ಲೆಯಲ್ಲಿ ಮತ್ತೆ ಖಾಸಗಿ ಶಾಲೆಗಳು ಡೊನೇಷನ್ ಹೆಸರಿನಲ್ಲಿ ಪೋಷಕರಿಂದ ಲಕ್ಷಾಂತರ ರೂಪಾಯಿ ವಸೂಲಿಗೆ ಇಳಿದಿವೆ. ಆದರೆ, ಲಕ್ಷ, ಲಕ್ಷ ಪಾವತಿಸಿ ಮಕ್ಕಳನ್ನು ಶಾಲೆಗೆ ಕಳುಹಿಸುವ ಪೋಷಕರು ಆ ಶಾಲೆ ಎಷ್ಟು ಸುರಕ್ಷಿತ ಎಂಬುದರ ಕುರಿತು ತಿಳಿದುಕೊಳ್ಳಲು ಮುಂದಾಗುವುದಿಲ್ಲ.
ನಾಯಿಕೊಡೆಗಳಂತೆ ಗಲ್ಲಿ ಗಲ್ಲಿಗಳಲ್ಲಿ ಖಾಸಗಿ ಶಾಲೆಗಳು ತಲೆ ಎತ್ತಿವೆ. ಶಾಲೆ ಆರಂಭಕ್ಕೆ ಶಿಕ್ಷಣ ಇಲಾಖೆ ವಿಧಿಸಿರುವ ಷರತ್ತುಗಳನ್ನು ಶಾಲೆಗಳು ಎಷ್ಟರ ಮಟ್ಟಿಗೆ ಪಾಲಿಸುತ್ತಿವೆ ಎಂಬುದು ಯಕ್ಷ ಪ್ರಶ್ನೆ.
ಶಾಲೆಯಲ್ಲಿ ಶೌಚಾಲಯ, ಸ್ವಚ್ಛ ಗಾಳಿ ವ್ಯವಸ್ಥೆ, ಅಗ್ನಿ ನಂದಿಸುವ ಕಿಟ್ ಸೇರಿ ಹಲವು ನಿಯಮಗಳ ಕುರಿತು ಆಯಾ ಇಲಾಖೆಯಿಂದ ಎನ್ಒಸಿ ಪಡೆದುಕೊಳ್ಳಬೇಕಾಗುತ್ತದೆ.
ಆದರೆ, ಕೇವಲ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಮಾತ್ರ ಶಿಕ್ಷಣ ಇಲಾಖೆಯ ನಿಬಂಧನೆಗಳನ್ನು ಅನುಕರಣೆ ಮಾಡುತ್ತಿವೆ. ಉಳಿದವು ಕಾಟಾಚಾರದಿಂದ ನಡೆದುಕೊಳ್ಳುತ್ತಿವೆ.
ಜಿಲ್ಲೆಯಲ್ಲಿ ಅನುದಾನಿತ, ಅನುದಾನ ರಹಿತ ಸೇರಿ ಒಟ್ಟು 620 ಶಾಲೆಗಳು ಇಲಾಖೆಯಿಂದ ಅನುಮತಿ ಪಡೆದಿವೆ. ಎಲ್ಲವೂ ಅಗತ್ಯ ಸುರಕ್ಷತಾ ಕ್ರಮಗಳ ಬಗ್ಗೆ ಆಯಾ ಇಲಾಖೆಯಿಂದ ಪಡೆದ ಪತ್ರ ನೀಡಿವೆ.
ಖಾಸಗಿ ಶಿಕ್ಷಣ ಸಂಸ್ಥೆಗಳು ಅನಧಿಕೃತವಾಗಿ ನಡೆಯುತ್ತಿವೆ ಎನ್ನುವ ದೂರು ಬಂದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಜೊತೆಗೆ ಅನುಮತಿ ಪಡೆದು ಮೂಲಸೌಲಭ್ಯ ನೀಡದ ಶಿಕ್ಷಣ ಇಲಾಖೆ ಬಗ್ಗೆ ದೂರು ನೀಡಿದರೆ, ತಾವೇ ಖುದ್ದು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಡಿಡಿಪಿಐ ಆಶ್ವಾಸನೆ ನೀಡಿದ್ದಾರೆ.