ದೇಶಕ್ಕೆ ಅತ್ಯಂತ ಮಾರಕವಾಗಿರುವ ಕೊರೊನಾಗೆ ಕೊನೆಯುಸಿರೆಳೆದವ್ರು ಅದೆಷ್ಟೋ ಮಂದಿ. ಮೃತದೇಹಗಳ ಬಳಿ ತೆರಳಲು ಸಂಬಂಧಿಕರೇ ಭಯಪಡುವ ಈ ಸಂದರ್ಭದಲ್ಲಿ, ಶವಸಂಸ್ಕಾರ ಮಾಡ್ತಿರೋ ಕಾರ್ಮಿಕರ ಸೇವೆ ಮಹತ್ವದ್ದು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಶವಗಳಿಗೆ ಅಂತ್ಯಸಂಸ್ಕಾರ ನಡೆಸುವಾಗ ಅವಶ್ಯವಿರುವ ಸುರಕ್ಷತಾ ಕ್ರಮಗಳಿಗೆ ಒತ್ತು ನೀಡಲಾಗುತ್ತಿದೆ. ಜಿಲ್ಲೆಯಲ್ಲಿರುವ ಹಲವು ಸ್ಮಶಾನಗಳಲ್ಲಿನ ಕಾರ್ಮಿಕರೊಂದಿಗೆ ಸಾಮಾಜಿಕ ಕಾರ್ಯಕರ್ತರೂ ಕೈಜೋಡಿಸಿದ್ದಾರೆ. ಜಿಲ್ಲಾಡಳಿತದ ಮುತುವರ್ಜಿಯಿಂದ ಇವರಿಗೆಲ್ಲ ಲಸಿಕೆ ಕೂಡ ಹಾಕಿಸಲಾಗಿದೆ. ಪಾಲಿಕೆ ವತಿಯಿಂದ ಅಂತ್ಯಕ್ರಿಯೆ ನಡೆಸಲಾಗ್ತಿದ್ದು, ಜನರಿಗೆ ಯಾವುದೇ ಶುಲ್ಕ ವಿಧಿಸುತ್ತಿಲ್ಲ.
ವಿಜಯಪುರ ನಗರದಲ್ಲಿ ಕೇವಲ ಒಂದೇ ಒಂದು ಸ್ಮಶಾನದಲ್ಲಿ ಕೋವಿಡ್ನಿಂದ ಮೃತಪಡುವವರ ಶವಸಂಸ್ಕಾರ ನಡೆಸಲಾಗ್ತಿದೆ. ಶಂಕರ ಎಂಬಾತ ಸ್ಮಶಾನದಲ್ಲಿಯೇ ಚಿಕ್ಕ ಮನೆಯಲ್ಲಿ ಜೀವನ ಸಾಗಿಸ್ತಿದ್ದು, ಈತನಿಗೆ ಸರ್ಕಾರದ ವತಿಯಿಂದ ಸಾವುದೇ ಸೌಲಭ್ಯ ಸಿಗುತ್ತಿಲ್ಲ.
ಸ್ಮಶಾನ ಅಭಿವೃದ್ಧಿ ಸಮಿತಿ ವತಿಯಿಂದಲೇ ಕಾರ್ಮಿಕ ಶಂಕರನಿಗೆ ಕನಿಷ್ಠ ಸೌಲಭ್ಯಗಳನ್ನು ಒದಗಿಸಲಾಗಿದೆ. ನಮಗೂ ಸರ್ಕಾರದ ವತಿಯಿಂದ ಯಾವುದೇ ಸೌಲಭ್ಯವಿಲ್ಲ. ಸರ್ಕಾರ ನಮ್ಮ ನೆರವಿಗೆ ಬರಬೇಕಿದೆಯೆಂದು ಸ್ಮಶಾನ ಅಭಿವೃದ್ಧಿ ಸಮಿತಿ ಅಧ್ಯಕ್ಷರು ಹೇಳುತ್ತಾರೆ.
ಸೋಂಕಿತರು, ಮೃತದೇಹದ ಬಳಿಗೆ ತೆರಳಲು ಸ್ವತಃ ಕುಟುಂಬಸ್ಥರೇ ಹಿಂಜರಿಯುವಾಗ ಕೋವಿಡ್ನಿಂದ ಮೃತಪಟ್ಟವರ ಶವಸಂಸ್ಕಾರ ಮಾಡೋವ್ರ ಸೇವೆ ಸಣ್ಣದಲ್ಲ. ಸರ್ಕಾರ ಸ್ಮಶಾನದಲ್ಲಿ ಕೆಲಸ ಮಾಡುವ ಕಾರ್ಮಿಕ ಅಹವಾಲುಗಳಿಗೆ ಶೀಘ್ರ ಸ್ಪಂದಿಸಬೇಕಿದೆ.