ವಿಜಯಪುರ: ಐತಿಹಾಸಿಕ ಗೋಲಗುಮ್ಮಟ ಸ್ಮಾರಕ ಹೊಂದಿರುವ ವಿಜಯಪುರ ಜಿಲ್ಲೆಯಲ್ಲಿ ಇತ್ತೀಚಿಗೆ ವಂಚನೆ, ಆನ್ಲೈನ್ ಮೋಸ ಪ್ರಕರಣಗಳು ಹೆಚ್ಚಾಗುತ್ತಿವೆ. ಒಂದು ವಾರದಲ್ಲಿ ಮೂರು ವಿಭಿನ್ನ ಮೋಸದ ಪ್ರಕರಣಗಳು ದಾಖಲಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ.
ಫೇಸ್ಬುಕ್ ಗೆಳತಿ ಸ್ನೇಹ ಮಾಡಿ ಸಿಂದಗಿಯ ಯುವಕನೊಬ್ಬ 39 ಲಕ್ಷ ರೂ. ಕಳೆದುಕೊಂಡಿದ್ದರೆ, ಬ್ಯಾಂಕ್ ಸಾಲ ಕೊಡಿಸುವುದಾಗಿ ವ್ಯಕ್ತಿಯೊಬ್ಬ 11ಲಕ್ಷ ರೂ. ವಂಚನೆ ಮಾಡಿದ್ದಾನೆ. ಈ ಎರಡು ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ವಿಜಯಪುರ ನಗರದ ಚಿನ್ನದ ವ್ಯಾಪಾರಿಯೊಬ್ಬನಿಗೆ ಆತನ ಅಂಗಡಿ ಸೆಲ್ಸ್ಮೆನ್ಗಳಾಗಿ ಕೆಲಸ ಮಾಡುತ್ತಿದ್ದ ಇಬ್ಬರು ಕೋಟ್ಯಂತರ ರೂ. ಬೆಲೆ ಬಾಳುವ ಚಿನ್ನಾಭರಣ ಲಪಟಾಯಿಸಿ ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನಡೆದಿದ್ದೇನು?: ವಿಜಯಪುರ ನಗರದ ರಾಮಮಂದಿರ ರಸ್ತೆಯ ಬಾಲಾಜಿ ಮಂದಿರ ಸಮೀಪ ಇರುವ ಕಾವ್ಯಾ ಜುವೆಲ್ಸ್ ಅಂಗಡಿಯಲ್ಲಿ ಈ ವಂಚನೆ ನಡೆದಿದೆ. ಜುವೆಲ್ಸ್ ಅಂಗಡಿ ಮಾಲೀಕ ಪರೇಶ ಗಜರಾಜ್ ಜೈನ್ ಅವರ ಮಾಲೀಕತ್ವದ ಹೋಲ್ಸೆಲ್ ಅಂಗಡಿಯಲ್ಲಿ ಕಳೆದ ಎರಡು ವರ್ಷಗಳಿಂದ ಮುಂಬೈ ಮೂಲದ ಜಗದೀಶ ಕಾಂತಿಲಾಲ್ ಗೋಮಾವತ್ ಹಾಗೂ ಉತ್ತರ ಪ್ರದೇಶ ಮೂಲದ ಧರ್ಮೇಂದ್ರ ಗೌರ ಎಂಬುವರು ಸೆಲ್ಸ್ಮನ್ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರು ಜಿಲ್ಲೆ ಹಾಗೂ ಹೊರ ಜಿಲ್ಲೆಯ ರಿಟೇಲ್ ಚಿನ್ನದ ವ್ಯಾಪಾರಿಗಳಿಗೆ ಪರೇಶ ಜೈನ್ ನೀಡುವ ಚಿನ್ನಾಭರಣ ಸರಬರಾಜು ಮಾಡುತ್ತಿದ್ದರು.
ಇದೇ ನವೆಂಬರ್ 13 ರಂದು ಚಿನ್ನದ ವ್ಯಾಪಾರಿ ಪರೇಶ ಜೈನ್ ತನ್ನ ಇಬ್ಬರು ಸೆಲ್ಸ್ ಮೆನ್ಗಳಿಗೆ 2,10, 71,266 ಕೋಟಿ ರೂ. ಮೌಲ್ಯದ 4969.6 ಗ್ರಾಂ ಬಂಗಾರದ ಆಭರಣಗಳನ್ನು ನೀಡಿ ಹುಬ್ಬಳ್ಳಿ, ರಾಮದುರ್ಗ, ಸವದತ್ತಿ, ಮುಧೋಳ ಹಾಗೂ ಜಮಖಂಡಿಯಲ್ಲಿರುವ ರಿಟೇಲ್ ಚಿನ್ನಾಭರಣ ಮಳಿಗೆಗಳಿಗೆ ನೀಡಿ ಹಣ ಪಡೆದುಕೊಂಡು ಬನ್ನಿ ಎಂದು ಹೇಳಿ ಕಳುಹಿಸಿದ್ದರು.
ಆದರೆ ಸೆಲ್ಸ್ಮನ್ಗಳಾದ ಜಗದೀಶ ಗೋಮಾವತ್ ಹಾಗೂ ಧರ್ಮೇಂದ್ರ ಗೌರ ಚಿನ್ನಾಭರಣ ಪಡೆದು ಚಿನ್ನದ ವ್ಯಾಪಾರಿಗಳಿಗೆ ನೀಡದೇ 2.10 ಕೋಟಿಗಿಂತ ಅಧಿಕ ಮೌಲ್ಯದ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಇಬ್ಬರು ಸೆಲ್ಸ್ ಮೆನ್ಗಳ ವಿರುದ್ಧ ನಂಬಿಕೆ ದ್ರೋಹ, ವಂಚನೆ ಪ್ರಕರಣ ದಾಖಲಿಸಿದ್ದಾರೆ.
ಓದಿ: ಸಚಿವಾಲಯದ ಕಾರು ಬಳಸಿ ಸುಮಾರು ಕೋಟಿ ರೂ.ವಂಚನೆ: ಆರೋಪ ಮುಕ್ತಿಗೊಳಿಸಲು ಹೈಕೋರ್ಟ್ ನಿರಾಕರಣೆ