ಮುದ್ದೇಬಿಹಾಳ (ವಿಜಯಪುರ): ಕಬ್ಬು ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದ್ದು, ತಾಲೂಕಿನ ಯರಗಲ್-ಮದರ್ ಬಾಲಾಜಿ ಶುಗರ್ಸ್ಗೆ ಮುತ್ತಿಗೆ ಹಾಕಿದ್ದಾರೆ.
ಚಾಲನೆಯಲ್ಲಿದ್ದ ವೇಳೆ ಕಾರ್ಖಾನೆಗೆ ನುಗ್ಗಿದ ನೂರಾರು ಸಂಖ್ಯೆಯ ರೈತರು ಕಬ್ಬು ನುರಿಸುವುದನ್ನು ತಡೆಯುವಂತೆ ಆಗ್ರಹಿಸಿದರು. ಆದರೆ ಇದಕ್ಕೆ ಸ್ಪಂದಿಸದೆ ಇದ್ದಾಗ ಸಹನೆ ಕಳೆದುಕೊಂಡ ರೈತರು ಕಾರ್ಖಾನೆಯ ಮೇಲೆ ಕಲ್ಲು, ಕಬ್ಬಿನ ಜಲ್ಲೆ ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಕಬ್ಬು ನುರಿಸಲು ಹಾಕುವ ಕೇನ್ ಕ್ಯಾರಿಯರ್ನಲ್ಲಿ ನಿಂತು ಪ್ರತಿಭಟಿಸಿದ್ದಾರೆ. ಈ ವೇಳೆ ಕೆಲ ರೈತರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.
ಸ್ಥಳದಲ್ಲಿ ಡಿವೈಎಸ್ಪಿ, ಸಿಪಿಐ, ಇಬ್ಬರು ಪಿಎಸ್ಐ ಹಾಗೂ 50ಕ್ಕೂ ಹೆಚ್ಚು ಪೊಲೀಸರಿಂದ ರೈತರ ಮನವೊಲಿಕೆ ವಿಫಲವಾಗಿದೆ. ನೂರಾರು ರೈತರು ಕಾರ್ಖಾನೆಗೆ ಮುತ್ತಿಗೆ ಹಾಕಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಕೆಲವರು ಕಬ್ಬಿನ ಜಲ್ಲೆ, ಕಲ್ಲು ತೂರಾಟ ನಡೆಸಿ ಕಾರ್ಖಾನೆ ಕೇನ್ ಕ್ಯಾರಿಯರ್ ಕೊಠಡಿ ಗಾಜು ಪುಡಿ-ಪುಡಿ ಮಾಡಿದ್ದಾರೆ.
ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿ ಬಂದ್, ಉರುಳು ಸೇವೆ ಮಾಡಿ ಕಬ್ಬು ಬೆಳೆಗಾರರ ಪ್ರತಿಭಟನೆ