ವಿಜಯಪುರ: ಕಳೆದ 9 ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಆಲಮಟ್ಟಿ-ಮುದ್ದೇಬಿಹಾಳ-ಯಾದಗಿರಿ ರೈಲು ಮಾರ್ಗ ನಿರ್ಮಾಣದ ಕನಸಿಗೆ ಸದ್ಯ ಗರಿ ಮೂಡಿದ್ದು, ಮತ್ತೆ ಹೋರಾಟದ ರೂಪುರೇಷೆಗಳನ್ನು ಹೆಣೆಯಲಾಗುತ್ತಿದೆ.
ಹೌದು, ದಶಕಗಳ ಬೇಡಿಕೆ ಈಡೇರಿಕೆಗೆ ಈ ರೈಲು ಮಾರ್ಗದ ಗ್ರಾಮಗಳ ಜನತೆ ವಿನೂತನ ಮಾದರಿಯಲ್ಲಿ ಹೋರಾಟಕ್ಕೆ ಮುಂದಾಗಿದ್ದು, ಕ್ರಾಂತಿಕಾರಿ ಬೆಳವಣಿಗೆಯಾಗಿ ಪರಿಣಮಿಸಲಿದೆ ಎನ್ನಲಾಗುತ್ತಿದೆ. ಇದುವರೆಗೂ ಮುದ್ದೇಬಿಹಾಳ ಪಟ್ಟಣದ ಜನತೆಗೆ ಸೀಮಿತವಾಗಿದ್ದ ಈ ಹೋರಾಟದಲ್ಲಿ ಮಾರ್ಗ ಮಧ್ಯದ ಎಲ್ಲಾ ಗ್ರಾಮಸ್ಥರು ಪಾಲ್ಗೊಳ್ಳಲಿದ್ದಾರೆ.
ಈ ಸಲುವಾಗಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಬಸವೇಶ್ವರ ವೃತ್ತದಲ್ಲಿ ಆಲಮಟ್ಟಿ-ಮುದ್ದೇಬಿಹಾಳ-ಯಾದಗಿರಿ ನೂತನ ರೈಲು ಮಾರ್ಗ ಅನುಷ್ಠಾನ ಕುರಿತು ಜನಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಹೋರಾಟಗಾರರಾದ ಬಸವರಾಜ ನಂದಿಕೇಸ್ವರಮಠ ಹಾಗೂ ಸಮಾಜ ಸೇವಕ ಗಿರೀಶ್ ಗೌಡ ಪಾಟೀಲ ನೇತೃತ್ವದಲ್ಲಿ ಈ ಹೋರಾಟ ನಡೆಯಲಿದೆ.
ಇನ್ನು ಮುದ್ದೇಬಿಹಾಳದಿಂದ ಯಾದಗಿರಿವರೆಗೆ ಜನಜಾಗೃತಿ ವಾಹನದ ಮೂಲಕ ಸಂಚರಿಸಿ ಪ್ರಮುಖ ಪಟ್ಟಣ ಹಾಗೂ ನಗರ ಪ್ರದೇಶಗಳಾದ ತಾಳಿಕೋಟಿ, ಹುಣಸಗಿ, ಸುರಪುರ, ಶಹಾಪುರ ಹಾಗೂ ಯಾದಗಿರಿಯಲ್ಲಿ ಸಭೆ ನಡೆಸಲು ಹೋರಾಟಗಾರರು ತೀರ್ಮಾನಿಸಿದ್ದಾರೆ. ಒಟ್ಟಿನಲ್ಲಿ ವಿನೂತನ ಹೋರಾಟ ದಶಕಗಳ ಕನಸಿಗೆ ಮತ್ತೆ ಮರು ಜೀವ ತುಂಬಿದೆ.