ವಿಜಯಪುರ: ಭೀಮಾ, ಕೃಷ್ಣಾ ಮತ್ತು ಡೋಣಿ ನದಿ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂಬುದಾಗಿ ಘೋಷಣೆ ಮಾಡಬೇಕು ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತು ಕೂಡಲೇ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು. ಆಗ ಸಂತ್ರಸ್ತರಿಗೆ ಹೆಚ್ಚುವರಿ ಪರಿಹಾರ ನೀಡಲು ಸಾಧ್ಯವಾಗುತ್ತದೆ. ಮನೆ-ಮಠ ಹಾಗೂ ಬೆಳೆ ಹಾನಿ ತೊಂದರೆ ಅನುಭವಿಸುತ್ತಿರುವ ರೈತರಿಗೆ ಸಂಪೂರ್ಣ ಪರಿಹಾರ ನೀಡಲು ಸಾಧ್ಯವಿಲ್ಲ. ಆದರೆ ತಕ್ಕಮಟ್ಟಿಗಾದರೂ ಪರಿಹಾರ ದೊರಕಿಸಿಕೊಡಬಹುದು ಎಂದು ಹೇಳಿದರು.
ಪ್ರವಾಹ ನಿರ್ವಹಣೆ ಕುರಿತು ರಾಷ್ಟ್ರೀಯ ನೀತಿ ಜಾರಿಗೊಳಿಸುವ ಅಗತ್ಯವಿದೆ. ಯಾವ ರಾಜ್ಯದ ರೈತರಾದರೂ ಒಂದೇ. ಸಂಕಷ್ಟಕ್ಕೆ ಒಳಗಾಗುವ ರೈತರ ಕಣ್ಣೀರು ಒರೆಸುವ ಕೆಲಸ ಕೇಂದ್ರ ಸರ್ಕಾರ ಮಾಡಬೇಕು. ಕರ್ನಾಟಕವಷ್ಟೇ ಅಲ್ಲ, ಮಹಾರಾಷ್ಟ್ರದಲ್ಲೂ ಪ್ರವಾಹ ಉಂಟಾಗಿದೆ. ಸುಕ್ಷೇತ್ರ ಪಂಢರಪುರ ನಗರ ಭಾಗಶ: ಮುಳುಗಡೆಯಾಗಿದೆ. ಮಹಾರಾಷ್ಯ ಸರ್ಕಾರ ಅವೈಜ್ಞಾನಿಕ ನೀರು ಬಿಡುಗಡೆ ಮಾಡಿದ್ದರಿಂದ ಶೇ. 90ರಷ್ಟು ಭೀಮಾ ನದಿಯಲ್ಲಿ ಪ್ರವಾಹ ಉಂಟಾಗಿದೆ. ಶೇ. 10 ರಷ್ಟು ಸೊನ್ನ ಬ್ಯಾರೇಜ್ ನಿರ್ವಹಣೆಯಲ್ಲಿ ತಪ್ಪಾಗಿದೆ. ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳ ಅಚಾತುರ್ಯದಿಂದ ರೈತರಿಗೆ ಸಮಸ್ಯೆಯಾಗಿದೆ. ರಾಜ್ಯ-ರಾಜ್ಯಗಳ ನಡುವಿನ ಸಮನ್ವಯ ಕೊರತೆಯಿಂದ ರೈತರು ಬೆಲೆ ತೆರಬೇಕಾಗಿದೆ ಎಂದರು.
ಕೇಂದ್ರ ಸರ್ಕಾರ ಜಲವಿವಾದಗಳನ್ನು ಕೇಂದ್ರ ನಿರ್ವಹಿಸಬೇಕು. ಈ ಮೂಲಕ ಎಲ್ಲ ರಾಜ್ಯಗಳಲ್ಲಿ ಸಮನ್ವಯತೆ ಸಾಧಿಸಬೇಕು. ನೀರು ನಿರ್ವಹಣೆಯಲ್ಲಿಯೂ ವೈಜ್ಞಾನಿಕ ನೀತಿ ರೂಪಿಸುವ ಅಗತ್ಯ ಇದೆ. ಜೂನ್ನಿಂದ ಡಿಸೆಂಬರ್ ವರೆಗೆ ಓರ್ವ ಪ್ರತಿನಿಧಿಯನ್ನು ರಾಜ್ಯ ಸರ್ಕಾರ ಮಹಾರಾಷ್ಟ್ರದಲ್ಲಿ ನಿರ್ವಹಣೆ ಮಾಡಲು ನೇಮಕ ಮಾಡಬೇಕು. ಈ ಮೂಲಕ ಮಹಾರಾಷ್ಟ್ರ ಬಿಡುಗಡೆ ಮಾಡುವ ನೀರಿನ ಬಗ್ಗೆ ನಿಗಾ ಇಡಲು ಸಾಧ್ಯ. ಆಗ ಪ್ರವಾಹ ಮುನ್ಸೂಚನೆ ನೀಡಲು ಸಾಧ್ಯವಾಗುತ್ತದೆ ಎಂದು ವಿವರಿಸಿದರು.
ಸಕ್ಕರೆ ಕಾರ್ಖಾನೆಗಳು ಸ್ಪಂದಿಸಲಿ:
ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಪ್ರವಾಹ ಪೀಡಿತ ಪ್ರದೇಶಗಳ ಕಬ್ಬನ್ನು ಮೊದಲು ನುರಿಸಬೇಕು ಎಂದು ಶಾಸಕರು ಮನವಿ ಮಾಡಿದರು. ಈ ಭಾಗದಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದೆ. ಈ ಹಿಂದೆ ಲಾತೂರ ಭೂಕಂಪ ಉಂಟಾದಾಗ ಸರ್ಕಾರದೊಂದಿಗೆ ಮಠ, ಮಾನ್ಯಗಳು ಕೈ ಜೋಡಿಸಿದ್ದವು. ಈ ಮೂಲಕ ಗ್ರಾಮಗಳನ್ನು ದತ್ತು ಪಡೆದು ಅಭಿವೃದ್ಧಿ ಮಾಡಲಾಗಿತ್ತು. ಈಗಲೂ ಇದೇ ರೀತಿ ಸ್ಪಂದನೆಯಾಗಬೇಕು ಎಂದರು.