ವಿಜಯಪುರ: ಮಹಾಮಾರಿ ಕೊರೊನಾ ಕಳೆದೆರಡು ತಿಂಗಳಿಂದ ತಲ್ಲಣಗೊಳಿಸಿದ್ದು, ಮಹಾರಾಷ್ಟ್ರದಿಂದ ಆಗಮಿಸುತ್ತಿರುವ ವಲಸೆ ಕಾರ್ಮಿಕರಿಂದ ಸೋಂಕು ಹರಡುತ್ತಿರುವುದು ಒಂದು ಕಡೆಯಾದರೆ, ಮತ್ತೊಂದೆಡೆ ಜನತೆ ಯಾವುದೇ ನಿಯಮಗಳನ್ನು ಪಾಲಿಸದೇ ಇರುವುದು ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತಲಿದ್ದು, ಮಹಾರಾಷ್ಟ್ರ ನಂಜಿನಿಂದ ಹೆಚ್ಚಿನ ಜನರಿಗೆ ಸೋಂಕು ತಗುಲಿದೆ. 4ನೇ ಹಂತದ ಲಾಕ್‌ಡೌನ್ ಜಾರಿ ಮಾಡಿ ರಾಜ್ಯ ಸರ್ಕಾರ ಕೆಲವು ಸಡಿಲಿಕೆ ಮಾಡಿ ಜನಜೀವನಕ್ಕೆ ಅನುಕೂಲ ಮಾಡಿ ಕೊಟ್ಟಿದ್ದೇ ಹೆಚ್ಚಿನ ಸಂಖ್ಯೆ ಪ್ರಕರಣಗಳು ಪತ್ತೆಯಾಗುತ್ತಿವೆ ಎನ್ನಲಾಗುತ್ತಿದೆ.
ನಗರದ ಕೇಂದ್ರ ಪ್ರದೇಶವಾದ ಎಲ್‌ಬಿಎಸ್ ಮಾರುಕಟ್ಟೆ ರಸ್ತೆ ಬಳಿ ಜನರು ಯಾವುದೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಗುಂಪು ಗುಂಪಾಗಿ ಸೇರುತ್ತಿದ್ದಾರೆ. ಇತ್ತ ಮಹಾರಾಷ್ಟ್ರದಿಂದ ಕಳ್ಳ ಮಾರ್ಗ ಹಿಡಿದು ಜನರು ಜಿಲ್ಲೆಯನ್ನು ಪ್ರವೇಶಿಸುತ್ತಿರುವುದರಿಂದ ಮತ್ತಷ್ಟು ಕೊರೊನಾ ಹೆಚ್ಚಾಗುತ್ತಿದೆ ಎಂಬ ಭೀತಿ ಜನರನ್ನು ಕಾಡುತ್ತಿದೆ. ಜಿಲ್ಲಾಡಳಿತ ಹೆಚ್ಚಿನ ಭದ್ರತೆ ನಿಯೋಜಿಸಿ ಗುಂಪಾಗಿ ಸೇರಿಸುತ್ತಿರುವ ಜನರಿಗೆ ಬ್ರೇಕ್ ಹಾಕುವ ಕೆಲಸ ಮಾಡಬೇಕು ಎನ್ನುವುದು ಸ್ಥಳೀಯರ ಆಶಯವಾಗಿದೆ.
ಈ ಕುರಿತಾಗಿ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲರನ್ನು ಕೇಳಿದರೆ, ನಗರದಲ್ಲಿ ಜನದಟ್ಟನೆ ಹೆಚ್ಚಾಗಿರುವ ಬಗ್ಗೆ ನನ್ನ ಗಮನಕ್ಕೂ ಬಂದಿದೆ. ಮಹಾರಾಷ್ಟ್ರದಿಂದ ಹೆಚ್ಚಿನ ಜನರು ಆಗಮಿಸುತ್ತಿರುವ ಕುರಿತಂತೆ ಮಹಾನಗರ ಪಾಲಿಕೆ ಹಾಗೂ ಪೊಲೀಸ್ ಇಲಾಖೆ ಮೂಲಕ ಕ್ರಮಕ್ಕೆ ಮುಂದಾಗುತ್ತೇವೆ ಎನ್ನುತ್ತಾರೆ.