ವಿಜಯಪುರ: ತಾಲೂಕಿನ ಬುರಾಣಪುರ ಗ್ರಾಮದಲ್ಲಿನ ಮನೆಗಳನ್ನು ತೆರವುಗೊಳಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿ ವೈ. ಎಸ್.ಪಾಟೀಲರಿಗೆ ಮನವಿ ಸಲ್ಲಿಸಿದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಾತಾ ಯೋಗೇಶ್ವರಿ, ಜಿಲ್ಲಾ ಪಂಚಾಯತಿ ಸದಸ್ಯ ನವೀನ ಅರಕೇರಿ, ಈಶ್ವರ ಶಿವೂರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿ ತಮ್ಮ ಗ್ರಾಮದಲ್ಲಿ 30 ವರ್ಷದಿಂದ ಸುಮಾರು 8 ಸಾವಿರ ಜನರು ವಾಸವಿದ್ದೇವೆ. ಸಮಯಕ್ಕೆ ಸರಿಯಾಗಿ ಮನೆ ಕರವನ್ನು ಪಾವತಿಸುತ್ತಿದ್ದೇವೆ. ಮನೆ, ಜಮೀನಿನೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದೇವೆ. ಈಗ ಏಕಾಏಕಿ ಜಾಗ ಖಾಲಿ ಮಾಡಿ, ಇಲ್ಲವಾದ್ರೆ ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ನೋಟಿಸ್ ನೀಡಲಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.
ಇಲ್ಲಿ ವಾಸವಿರುವ ನಾವು ಹೆಚ್ಚಿನವರು ದಿನಗೂಲಿ ಕಾರ್ಮಿಕರಾಗಿದ್ದೇವೆ. ಒಂದು ವೇಳೆ ಮನೆ ತೆರವುಗೊಳಿಸಿದರೆ ನಾವು ನಿರ್ಗತಿಕರಾಗಬೇಕಾಗುತ್ತದೆ. ಹೀಗಾಗಿ ಕೂಡಲೆ ತೆರವುಗೊಳಿಸುವ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು. ಜೊತೆಗೆ, ಜಾಗವನ್ನು ಪರಿಶೀಲಿಸಿ ಮಂಜೂರಾತಿ ಪತ್ರ ನೀಡಬೇಕು ಎಂದು ಮನವಿ ಸಲ್ಲಿಸಿದರು.