ಶಿರಸಿ (ಉತ್ತರ ಕನ್ನಡ): ನಾಗರ ಪಂಚಮಿ ಪ್ರಯುಕ್ತ ಭಕ್ತರು ದೇವಾಲಯಗಳ ನಾಗರ ಕಟ್ಟೆಗೆ ಹೋಗಿ ಹಾಲೆರೆದು ಪೂಜೆ ಸಲ್ಲಿಸಿದರೆ, ಉತ್ತರ ಕನ್ನಡ ಜಿಲ್ಲೆ ಶಿರಸಿಯ ಪ್ರಶಾಂತ್ ಹುಲೇಕಲ್ ಕುಟುಂಬದವರು ಜೀವಂತ ಹಾವಿಗೆ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು.
ಪ್ರಶಾಂತ್ ಹುಲೇಕಲ್ ಕುಟುಂಬದ ಸದಸ್ಯರು ಪ್ರತೀ ವರ್ಷದಂತೆ ಈ ಬಾರಿ ಕೂಡ ನಿಜ ನಾಗನಿಗೆ ಹಾಲೆರೆದು ಪಂಚಮಿ ಪೂಜೆ ಆಚರಿಸಿದ್ದಾರೆ. ಪ್ರತಿ ವರ್ಷ ಒಂದು ನಾಗರಹಾವನ್ನು ಪೂಜೆ ಮಾಡುತ್ತಿದ್ದ ಪ್ರಶಾಂತ್ ಕುಟುಂಬ ಈ ಬಾರಿ ಅದರ ಜೊತೆಗೆ ಎರಡು ನಾಗರ ಹಾವಿನ ಮರಿಯನ್ನೂ ತಂದು ಪೂಜಿಸಿದರು. ಈ ರೀತಿ ಪೂಜೆ ಮಾಡುವ ಮೂಲಕ ಉರಗ ಲೋಕದ ವೈಶಿಷ್ಟ್ಯ ಹಾಗೂ ಪ್ರಾಮುಖ್ಯತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶ ಇವರದ್ದು.
ಪ್ರಶಾಂತ್ ಕಳೆದ ಮೂವತೈದು ವರ್ಷಗಳಿಂದ ನಿರಂತರವಾಗಿ ಉರಗ ಸಂತತಿಯ ಸಂರಕ್ಷಣೆಯ ಬಗ್ಗೆ ವಿಶೇಷ ಕಾಳಜಿ ತೋರುತ್ತಾ ಬಂದಿದ್ದಾರೆ. ಕುಟುಂಬದ ಹಿರಿಯ ಸುರೇಶಣ್ಣ ಮರಣದ ಬಳಿಕ ಅವರ ಮಕ್ಕಳಾದ ಪ್ರಶಾಂತ, ಪ್ರಕಾಶ ಹಾಗೂ ಪ್ರಣವ ನಿಜವಾದ ಹಾವಿಗೆ ಪೂಜೆ ಸಲ್ಲಿಸಿ ನಾಗಪಂಚಮಿ ಆಚರಿಸುತ್ತಿದ್ದಾರೆ. ಪ್ರಶಾಂತ್ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಹಾವುಗಳನ್ನು ಹಾಗೂ ಅಪಾಯದಲ್ಲಿರುವ ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಟ್ಟು ಬರುವ ಕಾಯಕವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಯಾವುದೇ ಸಂದರ್ಭದಲ್ಲಿ ದೂರವಾಣಿ ಕರೆ ಬಂದರೂ ತಕ್ಷಣ ದೌಡಾಯಿಸಿ ಹಾವು ಹಿಡಿದು ರಕ್ಷಿಸುತ್ತಾರೆ. ಅರಣ್ಯ ಇಲಾಖೆಯೂ ಇವರ ಸೇವೆ ಪಡೆಯುತ್ತದೆ.
ಇದನ್ನೂ ಓದಿ: ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಸಂಭ್ರಮದ ನಾಗರಪಂಚಮಿ ಆಚರಣೆ