ಕಾರವಾರ: ಕೊರೊನಾ ವೈರಸ್ ದಾಳಿಗೆ ದೇಶವೇ ಸ್ತಬ್ಧಗೊಂಡಿದ್ದು, ಕೆಲಸ ಕಾರ್ಯವಿಲ್ಲದೇ ಅದೆಷ್ಟೊ ಜನರು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಆದರೆ ಇಂತಹ ಸ್ಥಿತಿಯನ್ನು ಅರಿತ ಇಲ್ಲೊರ್ವ ಕೂಲಿ ಕಾರ್ಮಿಕ ಲಾಕ್ ಡೌನ್ ನಡುವೆಯೂ ನಿತ್ಯ ಒಟ್ಟಾರೆ 30 ಕಿ.ಮೀ. ನಡೆದುಕೊಂಡೇ ಕೂಲಿಗೆ ತೆರಳುತ್ತಿದ್ದು, ಈ ಮೂಲಕ ಕುಟುಂಬಕ್ಕೆ ಬೆನ್ನೆಲುಬಾಗಿ ನಿಂತಿದ್ದಾನೆ.
ಹೌದು, ಕೊರೊನಾ ವೈರಸ್ ಹಾವಳಿಯಿಂದ ದೇಶವೇ ಲಾಕ್ ಡೌನ್ ಗೊಳಗಾಗಿದೆ. ಇದರಿಂದ ಸಾರಿಗೆ ಸೇರಿದಂತೆ ಎಲ್ಲ ರೀತಿಯ ಖಾಸಗಿ ವಾಹನಗಳ ಸಂಚಾರವನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ತೀರಾ ಅವಶ್ಯವಿದ್ದವರಿಗೆ ಮಾತ್ರ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಆದರೆ ತೀರಾ ಬಡತನದಲ್ಲಿದ್ದು, ಕೆಲಸದ ಅನಿವಾರ್ಯತೆಗೆ ಸಿಲುಕಿರುವ ಕುಮಟಾ ತಾಲೂಕಿನ ಹುಲಿದೇವರ ಕೊಡ್ಲದ ಹನುಮಂತ ಗೌಡ ಎಂಬುವವರು ನಿತ್ಯ 30 ಕಿ.ಮೀ. ನಡೆದುಕೊಂಡೇ ಕೆಲಸಕ್ಕೆ ತೆರಳುತ್ತಿರುವುದು ಬಡತನಕ್ಕೆ ಹಿಡಿದ ಕನ್ನಡಿಯಂತಿದೆ.
ಸಿದ್ದಾಪುರ ತಾಲೂಕಿನ ದೊಡ್ಮನೆ ಪಂಚಾಯಿತಿ ವ್ಯಾಪ್ತಿಯ ಜಡಿಗದ್ದೆ ಎಂಬಲ್ಲಿ ನಾಲ್ಕೈದು ಜನರು ಸೇರಿ ತೋಟದ ಕೆಲಸ ಮಾಡುತ್ತಿದ್ದು, ಹನುಮಂತ ಗೌಡ ಹುಲಿದೇವರ ಕೊಡ್ಲದಿಂದ ನಿತ್ಯ 15 ಕಿ.ಮೀ ಕಾಲ್ನಡಿಗೆಯಲ್ಲಿಯೇ ಸಾಗುತ್ತಿದ್ದಾರೆ. ಬೆಳಗ್ಗೆ- ಸಂಜೆ 8 ಗಂಟೆ ನಡೆದು 8 ಗಂಟೆ ಕೆಲಸ ಮಾಡುವ ಇವರಿಗೆ ಇಂತಹ ಸಂಕಷ್ಟದ ಸ್ಥಿತಿಯಲ್ಲೂ ದಣಿವರಿಯದೇ ದುಡಿಯುವಂತೆ ಮಾಡಿದೆ.
ಇನ್ನು ಈ ಬಗ್ಗೆ ಅವರನ್ನು ಕೇಳಿದ್ರೆ, ಕೊರೊನಾ ವೈರಸ್ ಬಗ್ಗೆ ಅರಿವಿದೆ. ನಾವು ಗುಂಪಾಗಿ ಕೆಲಸ ಮಾಡುವುದಿಲ್ಲ. ಎಲ್ಲರೂ ದೂರದಲ್ಲಿಯೇ ಇದ್ದು ಮುಖಕ್ಕೆ ಬಟ್ಟೆ ಕಟ್ಟಿಕೊಂಡೇ ಕೆಲಸ ಮಾಡುತ್ತೇವೆ. ಆದರೆ, ಒಂದು ದಿನ ಕೆಲಸಕ್ಕೆ ತೆರಳಲಿಲ್ಲ ಎಂದರೆ ಮನೆಯಲ್ಲಿ ತುಂಬಾ ಕಷ್ಟವಾಗುತ್ತದೆ. ತುಂಬಾ ಸಾಲ ಇದ್ದು ಮಳೆಗಾಲ ಬಂದಾಗ ಕೆಲಸಕ್ಕೆ ತೆರಳಲು ಸಾಧ್ಯವಿಲ್ಲ. ಈ ಕಾರಣದಿಂದ ಎಲ್ಲರೂ ಮಾತನಾಡಿಕೊಂಡು ಕೆಲಸಕ್ಕೆ ತೆರಳುತ್ತಿದ್ದೇವೆ. ಮೊದಲು ಬಸ್ ಓಡಾಡುವ ಕಾರಣ ನಿತ್ಯ ಬಸ್ ಮೂಲಕವೇ ತೆರಳುತ್ತಿದ್ದೆ. ಆದರೆ ಇದೀಗ ಎಲ್ಲವೂ ಬಂದಾಗಿದ್ದು, ಕೂಲಿಗೆ ಅನಿವಾರ್ಯವಾಗಿ ನಡೆದುಕೊಂಡೆ ತೆರಳಬೇಕು. ಮನೆ ಕಾಡಿನ ಮಧ್ಯೆ ಇದ್ದು, ಚಿಕ್ಕ ಮಕ್ಕಳು, ಹೆಂಡತಿ ಮಾತ್ರ ಇರುವ ಕಾರಣ ನಿತ್ಯ ಮನೆಗೆ ಬಂದು ಹೋಗುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ಹನುಮಂತ ಗೌಡ.