ಶಿರಸಿ: ಮಾರಿಕಾಂಬಾ ದೇವಸ್ಥಾನ ಸಮೀಪದ ನಿವಾಸಿ ಸೋಂಕಿತ ಚಾಲಕನ ಪತ್ನಿ ಹಾಗೂ ಅಯ್ಯಪ್ಪ ನಗರದ ಆರೋಗ್ಯ ಕಾರ್ಯಕರ್ತೆಗೆ ಕೊರೊನಾ ಸೋಂಕು ತಗುಲಿರುವುದು ಇಂದು ಖಚಿತವಾಗಿದೆ.
ವಾರದ ಹಿಂದೆ ನಗರದ ಚಾಲಕನೋರ್ವನಿಗೆ ಸೋಂಕು ತಗುಲಿದ್ದು ಖಚಿತವಾಗಿದ್ದ ಹಿನ್ನೆಲೆ ಆತನ ಪತ್ನಿಯನ್ನು ಕ್ವಾರಂಟೈನ್ ಮಾಡಲಾಗಿತ್ತು. ಸಧ್ಯ ಮಹಿಳೆಗೆ ಕೊರೊನಾ ಪಾಸಿಟಿವ್ ಬಂದಿದ್ದು, ಆಕೆ ಕರ್ತವ್ಯ ನಿರ್ವಹಿಸುತ್ತಿದ್ದ ಕೆಡಿಸಿಸಿ ಬ್ಯಾಂಕ್ ಸಿಬ್ಬಂದಿ ಹಾಗೂ ಅಲ್ಲಿ ವ್ಯವಹರಿಸುತ್ತಿದ್ದ ರೈತರಿಗೆ ಆತಂಕ ಶುರುವಾಗಿದೆ. ಸದ್ಯ ಬ್ಯಾಂಕ್ ಶಾಖೆಯನ್ನು ಸೀಲ್ ಡೌನ್ ಮಾಡಲಾಗಿದೆ.
ಶಿರಸಿ ಪ್ರಕರಣ ಹಾವೇರಿಯಲ್ಲಿ ದಾಖಲು
ಗುರವಾರ ಶಿರಸಿ ತಾಲೂಕಿನಲ್ಲಿ ಅಧಿಕೃತವಾಗಿ ಒಂದು ಪ್ರಕರಣ ಎಂದು ನಮೂದಿಸಲಾಗಿದೆ. ಆದರೆ ಇಲ್ಲಿನ ಅಯ್ಯಪ್ಪ ನಗರದ ನಿವಾಸಿಯಾಗಿರುವ ಮಹಿಳಾ ಆರೋಗ್ಯ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಆಕೆ ಹಾವೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರಣ ಅಲ್ಲಿಗೆ ಆಕೆಯ ಪ್ರಕರಣದ ಸಂಖ್ಯೆ ಸೇರಿಸಲಾಗಿದೆ ಎನ್ನಲಾಗಿದೆ.
ಹಾವೇರಿಯ ಕೊರೊನಾ ಸ್ವ್ಯಾಬ್ ಟೆಸ್ಟಿಂಗ್ ಲ್ಯಾಬ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳೆ, ನಗರದಿಂದ ಹಾವೇರಿಗೆ ಪ್ರತಿ ದಿನ ಹೋಗಿ ಬರುತ್ತಿದ್ದರು. ಅಲ್ಲಿ ಕೆಲಸ ಮಾಡುತ್ತಿರುವಾಗ ಜ್ವರದ ಲಕ್ಷಣಗಳು ಕಂಡು ಬಂದ ಹಿನ್ನಲೆ ಜು. 6ರಂದು ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರ ವರದಿ ಇಂದು ಪಾಸಿಟಿವ್ ಬಂದಿದ್ದು, ಆಕೆಯ ಮನೆಯವರನ್ನು ಹೋಮ್ ಕ್ವಾರಂಟೇನ್ ಮಾಡಿ ಸೋಂಕಿತಳನ್ನು ಹೆಚ್ಚಿನ ಚಿಕಿತ್ಸೆಗೆ ಕಾರವಾರಕ್ಕೆ ಕರೆದೊಯ್ಯಲಾಗಿದೆ.
ಮಾರಿಕಾಂಬಾ ದೇವಸ್ಥಾನದ ಸಿಬ್ಬಂದಿ ವರದಿ ನೆಗೆಟಿವ್
ಮಾರಿಕಾಂಬಾ ದೇವಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಲ್ಲಾ ಸಿಬ್ಬಂದಿಯ ವರದಿ ನೆಗೆಟಿವ್ ಬಂದಿದ್ದು, ತಾಯಿಯ ಆಶೀರ್ವಾದದಿಂದ ಭಕ್ತರು ನಿಟ್ಟುಸಿರುವ ಬಿಡುವಂತಾಗಿದೆ. ಮೊದಲು ರ್ಯಾಪಿಡ್ ಟೆಸ್ಟ್ನಲ್ಲಿ 5 ಸಿಬ್ಬಂದಿ ವರದಿ ಪಾಸಿಟವ್ ಬಂದಿದ್ದು, ತಕ್ಷಣ ಎಲ್ಲೆಡೆ ಸುದ್ದಿ ಹರಡಿದ ಪರಿಣಾಮ ಆತಂಕ ಮೂಡಿತ್ತು. ಆದರೆ ನಂತರ ನಡೆದ ಟೆಸ್ಟ್ನಲ್ಲಿ ಎಲ್ಲರ ವರದಿ ನೆಗೆಟಿವ್ ಬಂದಿದೆ.