ಕಾರವಾರ (ಉತ್ತರ ಕನ್ನಡ): ಜಿಲ್ಲೆಯಲ್ಲಿ ನಾಳೆ ಕೊರೊನಾ ಲಸಿಕೆ ವಿತರಣೆಗೆ ಸಿದ್ಧತೆ ಮಾಡಿಕೊಂಡಿದ್ದು, ಅನಗತ್ಯ ಗೊಂದಲ ಸೃಷ್ಟಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಎಚ್ಚರಿಕೆ ನೀಡಿದರು.
ಇದನ್ನೂ ಓದಿ...ಉತ್ತರಕನ್ನಡದಲ್ಲಿ ಕೋವಿಶೀಲ್ಡ್ ಹಂಚಿಕೆಗೆ ಕ್ಷಣಗಣನೆ: ಸಿದ್ಧತೆ ಕುರಿತು ಸಿಇಒ ಮಾಹಿತಿ
ಮೊದಲ ಹಂತದಲ್ಲಿ ಮಂಕಿ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿ ಒಟ್ಟು 11 ಕೇಂದ್ರಗಳಿಗೆ ಲಸಿಕೆ ನೀಡಲಾಗುತ್ತಿದೆ. ವೈದ್ಯರು, ನರ್ಸ್, ಆ್ಯಂಬುಲೆನ್ಸ್ ಸಿಬ್ಬಂದಿ ಸೇರಿ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುವ 14,665 ಮಂದಿ ನೋಂದಣಿ ಮಾಡಿಕೊಂಡಿದ್ದು, ಅವರಿಗೆ ಮಾತ್ರ ಲಸಿಕೆ ನೀಡಲಾಗುತ್ತದೆ ಎಂದು ಹೇಳಿದರು.
2ನೇ ಹಂತದಲ್ಲಿ ಪೊಲೀಸರು, ಕಂದಾಯ ಮತ್ತು ನಗರಾಭಿವೃದ್ಧಿ ಸಿಬ್ಬಂದಿಗೆ, 3ನೇ ಹಂತದಿಂದ ಸಾರ್ವಜನಿಕರಿಗೆ ಲಸಿಕೆ ಲಭ್ಯವಾಗಲಿದೆ. ಲಸಿಕೆ ತೆಗೆದುಕೊಂಡ 28 ದಿನಗಳ ಬಳಿಕ ಮತ್ತೊಮ್ಮೆ ಲಸಿಕೆ ನೀಡುವ ಪ್ರಕ್ರಿಯೆ ಹಂತ ಹಂತವಾಗಿ ನಡೆಯಲಿದೆ ಎಂದರು.
ಲಸಿಕೆ ಪಡೆದ ಜನರ ಆರೋಗ್ಯ ಸಂಬಂಧಿಸಿದ ಕಾರಣ ಬಹಳಷ್ಟು ಎಚ್ಚರಿಕೆ ವಹಿಸಲಾಗುತ್ತಿದೆ. ಆದರೆ, ಸಾಮಾಜಿಕ ಜಾಲತಾಣ ಇಲ್ಲವೇ ಮಾಧ್ಯಮಗಳ ಮೂಲಕ ಸುಳ್ಳು ಸುದ್ದಿ ಹಬ್ಬಿಸಿ ಜನರಲ್ಲಿ ಗೊಂದಲ ಸೃಷ್ಟಿಸಿದರೆ, ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.