ಕಾರವಾರ: ಮಂಗವೊಂದು ಸಂಶಯಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಅಂಕೋಲಾ ತಾಲೂಕಿನ ಅವರ್ಸಾ ಗ್ರಾಮದಲ್ಲಿ ಬೆಳಕಿಗೆ ಬಂದಿದ್ದು, ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಗ್ರಾಮದ ರಸ್ತೆಯಂಚಿನಲ್ಲಿ ತಲೆ ಇಲ್ಲದ ಮಂಗದ ದೇಹ ಪತ್ತೆಯಾಗಿದ್ದು, ನಾಯಿಗಳು ತಲೆ ತಿಂದಿರುವ ಶಂಕೆ ವ್ಯಕ್ತವಾಗಿದೆ. ತಕ್ಷಣ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸಿದ್ದು, ಇಲಾಖೆ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕಳೆದ ವರ್ಷ ಇದೇ ಗ್ರಾಮದಲ್ಲಿ ಸಂಶಯಾಸ್ಪದವಾಗಿ ಆರು ಮಂಗ ಸತ್ತು ಮಂಗನಕಾಯಿಲೆ ಬೆಳಕಿಗೆ ಬಂದಿತ್ತು. ಈ ವರ್ಷವೂ ಮಂಗ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಇನ್ನು ಸ್ಥಳಕ್ಕೆ ತೆರಳಿರುವ ಪಶುವೈದ್ಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಮಂಗದ ಮರಣೋತ್ತರ ಪರೀಕ್ಷೆ ನಡೆಸಿ ಸ್ಯಾಂಪಲ್ಅನ್ನು ಲ್ಯಾಬ್ಗೆ ಕಳುಹಿಸಲು ಮುಂದಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.