ಭಟ್ಕಳ (ಉ.ಕ): ಜಿಲ್ಲಾಧಿಕಾರಿಗಳ ಆದೇಶದನ್ವಯ ತಾಲೂಕಿನ ಪುರಸಭೆ, ಜಾಲಿ ಪಟ್ಟಣ ಪಂಚಾಯಿತಿ ಹಾಗೂ ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಜೆ 6 ರಿಂದ ಮುಂಜಾನೆ 6ರ ತನಕ ಯಾವುದೇ ಅಂಗಡಿ ಮುಂಗಟ್ಟು ತೆರೆಯದಂತೆ ಹಾಗೂ ಜನರ ಓಡಾಟ ನಿಷೇಧಿಸಲಾಗಿದ್ದು ವೈದ್ಯಕೀಯ ಕಾರಣಕ್ಕೆ ಮಾತ್ರ ಅಧಿಕಾರಿಗಳ ಪರವಾನಿಗೆ ಪಡೆದು ತೆರಳಲು ಅವಕಾಶ ನೀಡಲಾಗಿದೆ ಎಂದು ಸಹಾಯಕ ಆಯುಕ್ತ ಭರತ್ ಎಸ್. ತಿಳಿಸಿದರು.
ಭಟ್ಟಳದಲ್ಲಿ ನಡೆದ ಒಂದು ವಿವಾಹದ ಕಾರಣ ಕೊರೊನಾ ಸೋಂಕು ಹೆಚ್ಚಾಗಿತ್ತು. ಅದಕ್ಕೆ ಸಾರ್ವಜನಿಕರೇ ಖುದ್ದು ಮನೆಯಲ್ಲಿಯೇ ಇದ್ದು ಸಹಕರಿಸಬೇಕಿದೆ. ಅನಾವಶ್ಯಕ ಓಡಾಟ ಮಾಡದೆ, 70 ವರ್ಷ ಮೇಲ್ಪಟ್ಟ ವೃದ್ಧರು, ಗರ್ಭಿಣಿಯರು, ಅನಾರೋಗ್ಯದಿಂದ ಬಳಲುತ್ತಿರುವವರು, 10 ವರ್ಷಕ್ಕೂ ಕಡಿಮೆ ವಯಸ್ಸಿನ ಮಕ್ಕಳು ಯಾವುದೇ ಕಾರಣಕ್ಕೂ ಮನೆ ಬಿಟ್ಟು ಹೊರಗಡೆ ಬಾರದಂತೆ ಸೂಚಿಸಲಾಗಿದೆ ಎಂದರು.
ಶುಕ್ರವಾರದಿಂದ ನೈಟ್ ಕರ್ಪ್ಯೂ ಕಠಿಣವಾಗಿ ಜಾರಿಯಾಗಲಿದ್ದು ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆಯ ತನಕ ಜನರ ಓಡಾಟಕ್ಕೆ ಹಾಗೂ ಅಂಗಡಿ ಮುಂಗಟ್ಟುಗಳನ್ನು ತೆರೆಯುವುದಕ್ಕೆ ನಿರ್ಬಂಧ ಹಾಕಲಾಗಿದೆ. ಇನ್ನು ತಾಲೂಕಿನಲ್ಲಿ ಒಂದು ವಾರದಿಂದ ಬಂದ ಕೊರೊನಾ ಪ್ರಕರಣ ಹಾಗೂ ಅವರ ಪ್ರಾಥಮಿಕ ಹಂತದ ಸಂಪರ್ಕಿತರ ಪ್ರದೇಶವನ್ನಾಧರಿಸಿ ಹಾಟ್ಸ್ಪಾಟ್ ಪ್ರದೇಶವನ್ನಾಗಿಸಿ ಗುರುತಿಸಲಾಗಿದ್ದು, ಈ ಬಗ್ಗೆ ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿ ಮುಂದಿನ ನಿರ್ಣಯ ತಿಳಿಸಲಾಗುವುದು ಎಂದರು.
ನಿನ್ನೆ ಒಂದೇ ದಿನ 175 ಮಂದಿಯ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದ್ದು, ತಾಲೂಕು ಮಟ್ಟದ ಆರೋಗ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.