ಕಾರವಾರ: ಇಲ್ಲಿನ ವಾಣಿಜ್ಯ ಬಂದರಿಗೆ ಸರಕು ಸಾಗಣೆ ಹಡಗುಗಳು ಬಂದು ಹೋಗುವುದು ಸಾಮಾನ್ಯ. ಆದರೆ ಇಂದು ಕಾರವಾರ ಬಂದರಿಗೆ ಆಗಮಿಸಿದ್ದ ವಿಶಿಷ್ಟ ಹಡಗೊಂದು ನೂರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಆಕರ್ಷಣೆಗೆ ಕಾರಣವಾಗಿದ್ದು, ಮಹತ್ವದ ಸಂದೇಶವೊಂದನ್ನು ಸಾರುವ ಮೂಲಕ ಎಲ್ಲರ ಗಮನ ಸೆಳೆದಿದೆ.
ಭಾರತ ಸರ್ಕಾರದ ಭೂ ವಿಜ್ಞಾನ ಇಲಾಖೆಗೆ ಸೇರಿದ ಕೊಚ್ಚಿಯ ಕಡಲ ವಿಜ್ಞಾನ ಸಂಶೋಧನೆಯ 'ಸಾಗರ ಸಂಪದ' ಎಂಬ ಹಡಗನ್ನು ಭೂ ವಿಜ್ಞಾನ ಸಚಿವಾಲಯದ ವತಿಯಿಂದ 'ಸ್ವಚ್ಛತೆಯೇ ಸೇವೆ' ಎಂಬ ಅಭಿಯಾನಕ್ಕೆ ನಿಯೋಜಿಸಲಾಗಿದೆ. ಈ ಹಡಗಿನ ಮೂಲಕ ಪ್ಲಾಸ್ಟಿಕ್ ಬಳಕೆಯಿಂದ ಆಗುತ್ತಿರುವ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ.
ಪ್ಲಾಸ್ಟಿಕ್ ತ್ಯಾಜ್ಯ ಹೆಚ್ಚುತ್ತಿರುವ ದೇಶಗಳಲ್ಲಿ ಭಾರತ 12ನೇ ಸ್ಥಾನದಲ್ಲಿದ್ದು, ಇದು ಸಮುದ್ರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಪರಿಣಾಮ ಸಮುದ್ರ ಜೀವಿಗಳಿಗೆ ಪ್ಲಾಸ್ಟಿಕ್ನಿಂದ ಸಾಕಷ್ಟು ಹಾನಿ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಜಾಗೃತಿ ಮೂಡಿಸಲು ಮುಂದಾಗಿರೋದು ಉತ್ತಮ ಕಾರ್ಯ. ಈ ಬಗ್ಗೆ ತಿಳಿದ ಪ್ರತಿಯೊಬ್ಬರು ಜಾಗೃತರಾಗಬೇಕು ಎನ್ನುತ್ತಾರೆ ಬಂದರು ಇಲಾಖೆ ಅಧಿಕಾರಿ ಸುರೇಶ ಶೆಟ್ಟಿ.
ಇನ್ನು ಸಾಗರ ಸಂಪದ ಭಾರತೀಯ ಸಂಶೋಧನಾ ಹಡಗಾಗಿದ್ದು, ಇದನ್ನು ಸಾಗರ ವಿಜ್ಞಾನ, ಕಡಲಜೀವ ವಿಜ್ಞಾನ ಹಾಗೂ ಮೀನುಗಾರಿಕೆ ವಿಜ್ಞಾನದಲ್ಲಿ ಸಂಶೋಧನೆಗಳನ್ನು ನಡೆಸಲು ಬಳಸಲಾಗುತ್ತಿದೆ. ಕೊಚ್ಚಿಯ ಕಡಲ ಜೀವ ಸಂಪನ್ಮೂಲ ಮತ್ತು ಪರಿಸರ ವಿಜ್ಞಾನ ಕೇಂದ್ರದ 25ಕ್ಕೂ ಅಧಿಕ ತಂಡದ ಸದಸ್ಯರು ಈ ಹಡಗಿನಲ್ಲಿ ಸಂಶೋಧನೆಗಳನ್ನು ಕೈಗೊಳ್ಳುತ್ತಾರೆ. ಕಡಲ ಜೀವಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಹಾಗೂ ಶಾಲಾ ಮಕ್ಕಳು ಹಡಗಿನ ವೀಕ್ಷಣೆಗೆ ಆಗಮಿಸಿ ಮಾಹಿತಿ ಪಡೆದರು.
ಪ್ಲಾಸ್ಟಿಕ್ ಬಳಕೆಯನ್ನ ಸಾಧ್ಯವಾದಷ್ಟು ನಿಯಂತ್ರಿಸುವ ಮೂಲಕ ಮಾನವವನ ದೇಹದ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನ ತಪ್ಪಿಸುವುದು ಸಾಧ್ಯವಾಗಿದ್ದು, ಸಾರ್ವಜನಿಕರೂ ಈ ಬಗ್ಗೆ ಜಾಗೃತರಾಗಬೇಕು ಎನ್ನುತ್ತಾರೆ ತಜ್ಞರಾದ ಡಾ. ಹಶಿಮ್.
ಒಟ್ಟಿನಲ್ಲಿ ಸ್ವಚ್ಛ ಭಾರತ ಕಲ್ಪನೆಯನ್ನು ಹೊತ್ತು ಕಾರವಾರಕ್ಕೆ ಅಗಮಿಸಿರುವ ಹಡಗು ಜಾಗೃತಿ ಕಾರ್ಯಕ್ಕೆ ಮುಂದಾಗಿರೋದು ನಿಜಕ್ಕೂ ಉತ್ತಮ ಬೆಳವಣಿಗೆ. ಈ ಹಡಗು ಎರಡು ದಿನಗಳ ಕಾಲ ಕಾರವಾರ ಬಂದರಿನಲ್ಲಿಯೇ ಇರಲಿದೆ. ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರೂ ಸಹ ಹಡಗು ವೀಕ್ಷಣೆ ಮಾಡಬಹುದಾಗಿದೆ.