ಉತ್ತರಕನ್ನಡ : ಲಾಕ್ಡೌನ್ನಿಂದಾಗಿ ತೀರಾ ಸಂಕಷ್ಟದಲ್ಲಿರುವ ಆಟೋರಿಕ್ಷಾ ಚಾಲಕರಿಗೆ ಸರ್ಕಾರದಿಂದ ನೆರವು ಘೋಷಿಸುವಂತೆ ಸಹಾಯಕ ಆಯುಕ್ತರ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅವರಿಗೆ ಭಟ್ಕಳ ಆಟೋ ರಿಕ್ಷಾ ಚಾಲಕ, ಮಾಲೀಕರ ಸಂಘದ ಮಾಜಿ ಅಧ್ಯಕ್ಷ ವೆಂಕಟೇಶ ನಾಯ್ಕ ಮನವಿ ಸಲ್ಲಿಸಿದರು.
ಭಟ್ಕಳ ಸೇರಿ ರಾಜ್ಯದಲ್ಲಿ ಕಳೆದ ಒಂದು ತಿಂಗಳಿಂದ ಆಟೋ ಚಾಲಕರ ದುಡಿಮೆ ಇಲ್ಲ. ಮನೆಯಲ್ಲೇ ಕುಳಿತಿರೋ ಅವರೆಲ್ಲ ಕುಟುಂಬ ನಿರ್ವಹಣೆಗೆ ಪರದಾಡುತ್ತಿದ್ದಾರೆ. ಆಟೋರಿಕ್ಷಾ ಚಾಲಕರು ತೀರಾ ಬಡವರು. ಆಟೋವನ್ನೇ ನಂಬಿ ತಮ್ಮ ಕುಟುಂಬ ನಿರ್ವಹಣೆ ಮಾಡುತ್ತಿದ್ದವರು. ಚಾಲಕರು ಆಟೋ ಖರೀದಿ ಸೇರಿ ಮಕ್ಕಳ ವಿದ್ಯಾಭ್ಯಾಸ, ಮನೆ ನಿರ್ಮಾಣ, ಮದುವೆ ಹೀಗೆ ಅನೇಕ ಕಾರ್ಯಗಳಿಗೆ ಸಹಕಾರಿ ಸಂಘಗಳ ಬ್ಯಾಂಕ್, ರಾಷ್ಟೀಕೃತ ಬ್ಯಾಂಕ್ಗಳಲ್ಲೂ ಸಾಲ ಮಾಡಿಕೊಂಡಿರುತ್ತಾರೆ.
ದುಡಿಮೆ ಇಲ್ಲದೇ ಸಾಲ ಮರುಪಾವತಿ ಸೇರಿ ಆಟೋರಿಕ್ಷಾ ಇನ್ಸೂರೆನ್ಸ್, ತೆರಿಗೆ ಪಾವತಿ ತೀರಾ ಕಷ್ಟ. ನಿತ್ಯ ಒಂದು ಹೊತ್ತು ಸರಿಯಾಗಿ ಊಟ ಮಾಡಲು ಕೂಡ ಆಟೋಚಾಲಕರು ತೊಂದರೆ ಪಡುತ್ತಿದ್ದಾರೆ. ಸರ್ಕಾರಕ್ಕೆ ಆಟೋಚಾಲಕರಿಂದ ವಾರ್ಷಿಕ ಎಲ್ಲಾ ರೀತಿಯಲ್ಲೂ 1,840 ಕೋಟಿ ಆದಾಯ ಬರುತ್ತಿದೆ. ಆದರೆ, ಆಟೋ ಚಾಲಕರು ಸಂಕಷ್ಟದಲ್ಲಿದ್ದಾಗ ಸರ್ಕಾರ ಯಾವುದೇ ರೀತಿ ಸ್ಪಂದನೆ ಮಾಡದಿರುವುದು ಅವರ ನೈತಿಕ ಬಲ ಕುಗ್ಗಿಸಿದೆ. ಬೇರೆ ಕೆಲಸ ಗೊತ್ತಿಲ್ಲದ ಚಾಲಕರು ತಮ್ಮ ಜೀವನ ಸಾಗಿಸುವ ಬಗ್ಗೆ ಚಿಂತಿತರಾಗಿದ್ದಾರೆ.
ಈಗಾಗಲೇ ದೆಹಲಿ, ಆಂಧ್ರ ಮುಂತಾದ ಕಡೆ ಲಾಕ್ಡೌನ್ನಿಂದ ಸಂಕಷ್ಟದಲ್ಲಿರುವ ಆಟೋ ಚಾಲಕರಿಗೆ ಸರ್ಕಾರ ಮಾಸಿಕ 5 ಸಾವಿರ ರೂ. ನೀಡುತ್ತಿದೆ. ರಾಜ್ಯದಲ್ಲೂ ಆಟೋ ಚಾಲಕರಿಗೆ ತಿಂಗಳಿಗೆ 6 ಸಾವಿರ ರೂ. ಸರ್ಕಾರ ನೀಡಿದ್ರೆ ಅವರುಗಳ ಕುಟುಂಬ ನಿರ್ವಹಣೆಗೆ ಅನುಕೂಲವಾಗಲಿದೆ. ಸರ್ಕಾರ ಕೃಷಿಕರಿಗೆ ಕಿಸಾನ್ ಯೋಜನೆಯಡಿ ಹಣ ನೀಡಿದಂತೆ, ಆಟೋ ಚಾಲಕರಿಗೂ ಪ್ರಮುಖ ಯೋಜನೆಯನ್ನು ಶೀಘ್ರ ಜಾರಿಗೊಳಿಸಬೇಕು. ಆಟೋ ಚಾಲಕರಿಗೆ ಸರ್ಕಾರದ ಮೇಲೆ ಹೆಚ್ಚಿನ ವಿಶ್ವಾಸ ನಂಬಿಕೆವಿದೆ. ಆಟೋ ಚಾಲಕರನ್ನು ಕಾರ್ಮಿಕ ಇಲಾಖೆಯ ವ್ಯಾಪ್ತಿಗೆ ತಂದು, ಸರ್ಕಾರದ ಯೋಜನೆಗಳು ಸಿಗುವಂತೆ ಮಾಡಬೇಕೆಂದು ಮನವಿ ಮಾಡಲಾಗಿದೆ.