ಕಾರವಾರ/ಉತ್ತರ ಕನ್ನಡ: ದುಬೈನಿಂದ ಆಗಮಿಸಿದ್ದ ಭಟ್ಕಳ ಮೂಲದ ಮತ್ತೋರ್ವನಿಗೆ ಕೊರೊನಾ ಸೋಂಕು ಇರುವುದು ಧೃಡಪಟ್ಟಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.

ಭಟ್ಕಳ ಮೂಲದ 22 ವರ್ಷದ ಯುವಕನಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಮಾರ್ಚ್ 20ರಂದು ಗೋವಾ ವಿಮಾನ ನಿಲ್ದಾಣ ಮೂಲಕ ಕಾರವಾರಕ್ಕೆ ಆಗಮಿಸಿದ ಯುವಕ ನಗರದ ಹೋಟೆಲ್ ಒಂದರಲ್ಲಿ ಟೀ ಕುಡಿದು ಭಟ್ಕಳಕ್ಕೆ ತೆರಳಿದ್ದ ಎನ್ನಲಾಗಿದೆ. ಈತನನ್ನು ಚಿಕಿತ್ಸೆಗೊಳಪಡಿಸಿ, ಗಂಟಲು ದ್ರವವನ್ನು ಶಿವಮೊಗ್ಗ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅದರಂತೆ ವರದಿಯಲ್ಲಿ ಸೋಂಕು ಇರುವುದು ಧೃಡಪಟ್ಟಿದ್ದು, ಖಚಿತತೆಗಾಗಿ ಪುಣೆ ಪ್ರಯೋಗಾಲಯಕ್ಕೆ ಕಳುಹಿಸಿದಾಗ ಸೋಂಕು ಇರುವುದು ಮತ್ತೆ ದೃಢಪಟ್ಟಿದೆ.
ಸದ್ಯ ಯುವಕನಿಗೆ ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇಂದು ಸಂಜೆ ವೇಳೆಗೆ ಕಾರವಾರ ತಾಲೂಕಿನ ಕದಂಬ ನೌಕಾನೆಲೆಯ ಪತಂಜಲಿ ಆಸ್ಪತ್ರೆಗೆ ಸಾಗಿಸುವ ಸಾಧ್ಯತೆ ಇದೆ. ಇನ್ನು ಗೋವಾದಿಂದ ಆಗಮಿಸಿದ್ದ ಈ ಯುವಕನ ಟ್ರಾವೆಲ್ ಹಿಸ್ಟರಿಯನ್ನು ಅಧಿಕಾರಿಗಳು ಜಾಲಾಡುತ್ತಿದ್ದು, ಆತನ ಸಂಪರ್ಕಕ್ಕೆ ಬಂದಿದ್ದವರನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.