ಶಿರಸಿ: ಏ. 23 ರಂದು ಕರ್ನಾಟಕದ ಉತ್ತರ ಭಾಗದಲ್ಲಿ ಮತದಾನ ನಡೆಯಲಿದೆ. ಇದಕ್ಕಾಗಿ ಮತಯಾಚನೆಗೆ 3 ದಿನಗಳ ಕಾಲ ಪ್ರವಾಸ ಕೈಗೊಂಡಿದ್ದೇನೆ. ಈಗಾಗಲೇ 14-15 ಜಿಲ್ಲೆಗಳ ಪ್ರವಾಸ ಮಾಡಿದ್ದೇನೆ. ಎಲ್ಲಾ ಕಡೆ ಮೋದಿಯವರಿಗೆ ಪೂರಕವಾದ ವಾತಾವರಣವಿದೆ. ಮೋದಿ ಮತ್ತೊಮ್ಮೆ ಅನ್ನೋದು ಎಲ್ಲರ ಹೃದಯದ ಮಂತ್ರವಾಗಿದೆ ಎಂದು ಬಿಜೆಪಿ ಸ್ಟಾರ್ ಪ್ರಚಾರಕಿ , ನಟಿ ಮಾಳವಿಕಾ ಅವಿನಾಶ್ ಹೇಳಿದ್ದಾರೆ.
ಸಿದ್ದರಾಮಯ್ಯನವರು ಈಶ್ವರಪ್ಪನವರಿಗೆ ಕುರುಬರಿಗೆ ಟಿಕೆಟ್ ನೀಡಲು ಸಾಧ್ಯವಾಗಿಲ್ಲ ಎಂಬ ಟೀಕೆಗೆಪ್ರತಿಕ್ರಿಯಿಸಿದ ಮಾಳ್ವಿಕಾ ಅವಿನಾಶ್, ಜಾತಿ ವಿಚಾರ ಮಾತನಾಡಿದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಆಗುತ್ತದೆ ಎಂಬ ಪರಿಜ್ಞಾನವೂ ನಾಯಕರಿಗಿಲ್ಲ. ರಾಜಕೀಯದಲ್ಲಿ ಈ ರೀತಿಯ ಸಂಭಾಷಣೆ ಬರಬಾರದು. ಬಿಜೆಪಿಯವರನ್ನು ಜೆಡಿಎಸ್ ಮತ್ತು ಕಾಂಗ್ರೆಸ್ ಕೋಮುವಾದಿಗಳು ಎನ್ನುತ್ತಾರೆ. ಆದರೆ ಪದೆ ಪದೇ ಜಾತಿ ವಿಚಾರವನ್ನು ಎತ್ತುವವರು ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯನವರು ಎಂದು ಮಾಳ್ವಿಕಾ ಅವಿನಾಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮತದಾನ ಶೇಕಡಾವಾರು ಕಡಿಮೆ ಆದರೂ ನಮ್ಮ ಮತಗಳು ನಮಗೆ ಬಿದ್ದಿರುವ ನಂಬಿಕೆಯಿದೆ. ಪ್ರಾಯಶಃ ಕಾಂಗ್ರೆಸ್ ಮತ್ತು ಜೆಡಿಎಸ್ ಭಿನ್ನಾಭಿಪ್ರಾಯಗಳಿಂದ ಜೆಡಿಎಸ್-ಕಾಂಗ್ರೆಸ್ಗೆ ಮತ ಹಾಕಿಲ್ಲ ಅನಿಸುತ್ತದೆ. ಮಂಡ್ಯದಲ್ಲಿ ಯಾರು ಹೆಚ್ಚಿನ ಅಭಿಮಾನಗಳಿಸಿ ಗೆಲ್ಲುತ್ತಾರೆ ಎಂದು ಕಾದು ನೋಡಬೇಕಾಗಿದೆ ಎಂದು ತಿಳಿಸಿದರು.